ಉಡುಪಿ: ಆಟೋ ರಿಕ್ಷಾಗಳಲ್ಲಿ ಬಳಸುವ ಗ್ಯಾಸ್ ಇಂಧನದ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ, ಈ ದರ ಏರಿಕೆಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಧರಣಿ ನಡೆಸಲಾಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಟಿಯು ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆ, ಬಹುತೇಕ ಆಟೋ ಚಾಲಕರ ಮತ್ತವರ ಕುಟುಂಬ ಅವರ ದಿನನಿತ್ಯದ ಆದಾಯದ ಮೇಲೆ ಅವಲಂಬಿತರಾಗಿದ್ದು, ಆಟೋ ಗ್ಯಾಸ್ ದರ ಹೆಚ್ಚಳದಿಂದ ಆಟೋ ಚಾಲಕರ ಬದುಕಿಗೆ ದೊಡ್ಡ ಹೊಡೆತ ಬಿದ್ದಿದೆ, ಇಂಧನದ ದರ ಏರಿಕೆಯಿಂದ ಕುಟುಂಬ ನಿರ್ವಹಣೆ, ವಾಹನದ ಬಾಡಿಗೆ, ಬ್ಯಾಂಕ್ ಸಾಲ ಹಾಗೂ ವಾಹನ ನಿರ್ವಹಣೆ ಮುಂತಾದ ಖರ್ಚುಗಳನ್ನು ಭರಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಟಿಯು ಕಾರ್ಯಕರ್ತರು ಹಾಗೂ ಆಟೋ ಚಾಲಕರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ರಾಜ್ಯ ನಾಯಕ ಶಾಹಿದ್, ಜಿಲ್ಲಾ ಉಪಾಧ್ಯಕ್ಷ ರಫೀಕ್ ಪೊಲಿಪು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನೀಫ್ ಕಂಡ್ಲೂರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಸ್ಮಾಯಿಲ್ ಉಸ್ತಾದ್ ಸ್ವಾಗತಿಸಿ ನಿರೂಪಿಸಿದರು