ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂಕಲ್ಪಿಸಿರುವ ಅಪೂರ್ವ ಜಾಗತಿಕ ಯೋಜನೆಯಾದ ‘ಕೋಟಿ ಗೀತಾ ಲೇಖನ ಯಜ್ಞ’ ಮತ್ತು ‘ಗೀತಾ ಜಯಂತಿ’ ಪ್ರಯುಕ್ತ ಒಂದು ತಿಂಗಳು ನಡೆಯುವ ‘ಬೃಹತ್ ಗೀತೋತ್ಸವ’ ಅಂಗವಾಗಿ ಗೀತೋತ್ಸವ ಕಾರ್ಯಾಲಯವನ್ನು ಶನಿವಾರ ಶ್ರೀಗಳು ಉದ್ಘಾಟಿಸಿದರು.ನಂತರ ಮಾತನಾಡಿದ ಶ್ರೀಪಾದರು, ತಮ್ಮ ವಿಶ್ವ ಗೀತಾ ಪರ್ಯಾಯದಲ್ಲಿ, ಭಗವದ್ಗೀತೆಯ ತತ್ವವನ್ನೇ ಜೀವನದಲ್ಲಿ ಅಳವಡಿಸಿಕೊಂಡು, ವಿಶ್ವದೆಲ್ಲೆಡೆ ಸಂಚರಿಸಿದಾಗ ಭಗವದ್ಗೀತೆಯನ್ನು ಉಡುಗೊರೆಯಾಗಿ ವಿಶ್ವ ನಾಯಕರಿಗೆ ನೀಡುವ ಪರಿಪಾಠವನ್ನು ರೂಢಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಉಡುಪಿಗೆ ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದೆಲ್ಲವೂ ಗೀತಾಚಾರ್ಯ ಶ್ರೀಕೃಷ್ಣನ ಸಂಕಲ್ಪವಾಗಿದೆ. ನೀವೆಲ್ಲರೂ ಈ ಉತ್ಸವದ ಯಶಸ್ಸಿಗೆ ಸಹಕರಿಸಿ, ಶ್ರೀಕೃಷ್ಣ ಮುಖ್ಯಪ್ರಾಣರ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ಆಶಿಸಿದರು.ಮಠದ ದಿವಾನರಾದ ನಾಗರಾಜಾಚಾರ್ಯ ಮಾತನಾಡಿ, ವಿವಿಧ ಸಮಿತಿಗಳನ್ನು ಉಲ್ಲೇಖಿಸಿ ಎಲ್ಲ ಸಮುದಾಯದ ಜನರು ಪಾಲ್ಗೊಳ್ಳುವ ಮೂಲಕ ಬೃಹತ್ ಮಾಸೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.ಕಾರ್ಯದರ್ಶಿ ಪ್ರಸನ್ನಾಚಾರ್ಯ, ಪ್ರಧಾನಿ ಅವರ ಭೇಟಿಯ ವಿವರವನ್ನು ನೀಡಿ ಸಾರ್ವಜನಿಕರು ಮುಕ್ತವಾಗಿ ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಪ್ರಮೋದ್ ಸಾಗರ್ ಗೀತೋತ್ಸವದ ಮಾಹಿತಿ ನೀಡಿದರು. ರಮೇಶ ಭಟ್ ಸ್ವಾಗತಿಸಿದರು. ವಿಕ್ರಂ ಕುಂಟಾರ ವಂದಿಸಿದರು.ಸಭೆಯಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ಹಿಂದೂ ಜಾಗರಣ ವೇದಿಕೆ, ದೈವಜ್ಞ ಬ್ರಾಹ್ಮಣರ ಸಂಘ, ರಾಮ ಕ್ಷತ್ರಿಯ ಸಂಘ, ಮನೋಳಿಗುಜ್ಜಿ ಗಣೇಶೋತ್ಸವ ಸಮಿತಿ, ಗಾಣಿಗ ಸಮಾಜ, ಉಡುಪಿ ತಾಲೂಕು ಮಾತೃ ಮಂಡಳಿ, ತಾಲೂಕು ಬ್ರಾಹ್ಮಣರ ಸಂಘ, ಅಯ್ಯಪ್ಪ ಸೇವಾ ಮಹಿಳಾ ಮಂಡಳಿ, ಫಣಿಯಾಡಿ ಯುವಕರ ಸಂಘ, ಕಡಿಯಾಳಿ ಗೆಳೆಯರ ಬಳಗ, ನವಚೇತನ ಯುವಕ ಮಂಡಲ ಮೊದಲಾದ ಸಂಘ, ಯುವ ಬ್ರಾಹ್ಮಣ ಪರಿಷತ್,ತುಶಿಮಾಮ ಮೊದಲಾದ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.