ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇವಲ ಧ್ವಜಾರೋಹಣ ಮತ್ತು ಅಂಗನವಾಡಿಗಳ ಉದ್ಘಾಟನೆಗೆ ಸೀಮಿತವಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ ಭಾರಿ ಹಾನಿಯಾಗಿದ್ದರೂ ಅವರು ಮಾತ್ರ ಬೆಂಗಳೂರಿನಲ್ಲಿ ಕುಳಿತೇ ಉಡುಪಿಯ ಅಧಿಕಾರಿಗಳಿಗೆ ಸೂಚನೆ, ಹೇಳಿಕೆ ನೀಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಆರೋಪಿಸಿದ್ದಾರೆ.
ಸಚಿವೆ ಜಿಲ್ಲೆಗೆ ಬಂದು ಜನರ ಬೇಡಿಕೆಗಳನ್ನು ಈಡೇರಿಸುವುದು, ನಷ್ಟ ಪರಿಹಾರಕ್ಕೆ ಹಣ ಬಿಡುಗಡೆ ಮಾಡುವುದು, ಜಿಲ್ಲೆಯ ಉಸ್ತುವಾರಿಯಾಗಿ ಅವರ ಕರ್ತವ್ಯವಾಗಿದೆ. ಅದನ್ನವರು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಪೂರ್ಣ ಮನೆಹಾನಿಗೆ 5 ಲಕ್ಷ ರು., ಭಾಗಶಃ ಮನೆಹಾನಿಗೆ 3 ಲಕ್ಷ ರು. ಮತ್ತು ಸಣ್ಣಪುಟ್ಟ ಹಾನಿಗಳಿಗೆ 1 ಲಕ್ಷ ರು. ನಷ್ಟ ಪರಿಹಾರ ನೀಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಪೂರ್ಣ ಮನೆಹಾನಿಗೆ 1.20 ಲಕ್ಷ ರು., ಭಾಗಶಃ ಹಾನಿಗೆ 6,500 ರು. ಪರಿಹಾರ ನೀಡುತ್ತಿದೆ. ಈ ಬಾರಿಯ ಅನಿರೀಕ್ಷಿತ ಮಳೆಯಿಂದ ರೈತರು, ಜನರು ತತ್ತರಿಸಿಹೋಗಿದ್ದಾರೆ. ಆದರೇ ಸರ್ಕಾರ ಅಗತ್ಯ ಪರಿಹಾರ ನೀಡದೇ ಜನಸಾಮಾನ್ಯರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.ಉಡುಪಿ ಜಿಲ್ಲೆಯ ಗ್ರಾಮೀಣ ಮತ್ತು ಲೋಕೋಪಯೋಗಿ ರಸ್ತೆಗಳ ದುರಸ್ತಿಗೆ ಜಿಲ್ಲಾಡಳಿತ ಸರ್ಕಾರಕ್ಕೆ 125 ಕೋಟಿ ರು. ಬೇಡಿಕೆ ಸಲ್ಲಿಸಿದೆ. ಶಾಸಕರು ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೇ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದರು.ಕಾಂಗ್ರೆಸಿಂದ ಸುಳ್ಳು ಟೀಕೆ