ಉಡುಪಿ ಕೃಷ್ಣಮಠ: ಬೃಹತ್ ಗೀತೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Nov 21, 2024, 01:03 AM IST
20ಗೀತಾ | Kannada Prabha

ಸಾರಾಂಶ

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಡಿ. 29ರ ವರೆಗೆ ತ್ರಿಪಕ್ಷ ಶತವೈಭವ ಘೋಷವಾಕ್ಯದಡಿ ಆಯೋಜಿಸಲಾಗಿರುವ ಬೃಹತ್ ಗೀತೋತ್ಸವ ಉದ್ಘಾಟನೆಗೊಂಡಿತು.

ಮಠ ಮಂದಿರಗಳ ಸಂರಕ್ಷಣೆಯೂ ನಡೆಯಲಿ: ಕಾಂಚಿ ಶ್ರೀ

ಕನ್ನಡಪ್ರಭ ವಾರ್ತೆ ಉಡುಪಿ

ಇಂದು ನಮ್ಮ ಸನಾತನ ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆ ಜೊತೆಗೆ ವೇದಾಧ್ಯಯನ ಮತ್ತು ಮಠ ಮಂದಿರಗಳ ಸಂರಕ್ಷಣೆಯೂ ನಡೆಯಬೇಕಾಗಿದೆ ಎಂದು ಕಾಂಚಿ ಕಾಮಕೋಟಿ ಮಠಾಧೀಶ ಶಂಕರಾಚಾರ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದ್ದಾರೆ.ಅವರು ಬುಧವಾರ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಡಿ. 29ರ ವರೆಗೆ ತ್ರಿಪಕ್ಷ ಶತವೈಭವ ಘೋಷವಾಕ್ಯದಡಿ ಆಯೋಜಿಸಲಾಗಿರುವ ಬೃಹತ್ ಗೀತೋತ್ಸವ ಉದ್ಘಾಟಿಸಿ ಮಾತನಾಡುತಿದ್ದರು.ದೇವಾಲಯಗಳಲ್ಲಿ ಸನ್ನಿಧಿ ವೃದ್ಧಿಯಾದರೇ ಮಾತ್ರ ಸಾಲದು, ಜೊತೆಗೆ ನಿಧಿಯ ವೃದ್ಧಿಯೂ ಆಗಬೇಕಾಗಿದೆ. ಅದಕ್ಕಾಗಿ ದೇವಳ ನಿರ್ವಹಣೆಯ ಸಿಬಂದಿಯನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಬೇಕು ಎಂದರಲ್ಲದೇ, ಗೀತೆಯ ಸಂದೇಶ ಪ್ರತೀ ಮನೆ ಮನೆಗಳಿಗೆ ತಲುಪಬೇಕು, ಈ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕು ಎಂದು ಆಶಿಸಿದರು.ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಅಧ್ಯಾತ್ಮ ಮತ್ತು ಲೌಕಿಕ ಸಾಧನೆಗೆ ಗೀತೆ ಪೂರಕ. ಮನುಷ್ಯನ ಸರ್ವಾಂಗೀಣ ಪ್ರಗತಿಯನ್ನು ಗೀತೆಯಲ್ಲಿ ಕೃಷ್ಣ ತಿಳಿಸಿದ್ದಾನೆ. ಈ ರೀತಿಯ ಬೋಧೆ ಯಾವುದೇ ಧರ್ಮಗ್ರಂಥಗಳಲ್ಲಿ ಉಪಲಬ್ದವಿಲ್ಲ. ಆದ್ದರಿಂದ ಗೀತೆಯ ಪ್ರಚಾರ ವಿಶ್ವವ್ಯಾಪಿಯಾಗಬೇಕು ಎಂಬ ಆಶಯದಿಂದ ಈ ಗೀತೋತ್ಸವ ಸಂಘಟಿಸಿರುವುದಾಗಿ ತಿಳಿಸಿದರು.

ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥರು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಯಶ್ಪಾಲ್ ಸುವರ್ಣ ಮತ್ತು ಗುರುರಾಜ್ ಗಂಟಿಹೊಳಿ, ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಶಿ, ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್, ಆನೆಗುಡ್ಡೆ ದೇವಸ್ಥಾನದ ಮಾಜಿ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ, ವಿಹಿಂಪ ಪ್ರಾಂತೀಯ ಅಧ್ಯಕ್ಷ ಡಾ. ಎಂ.ಬಿ ಪುರಾಣಿಕ್, ಉದ್ಯಮಿ ಭುವನೇಂದ್ರ ಕಿದಿಯೂರು, ಸಮಾಜ ಚಿಂತಕ ರೋಹಿತ್ ಚಕ್ರತೀರ್ಥ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷ ಭುವನಾಭಿರಾಮ ಉಡುಪ ಆಗಮಿಸಿದ್ದರು.ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು. ಈ ಸಂದರ್ಭದಲ್ಲಿ ವಿಶ್ವ ಗೀತಾ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಚತುರ್ವೇದ ಪಠಣ, ಮಹಿಳೆಯರಿಂದ ಗೀತಾ ಪಠಣ, ಗೀತಾ ನೃತ್ಯ ನಡೆಯಿತು. ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ. ಗೋಪಾಲಾಚಾರ್ ನಿರೂಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ