ಉಡುಪಿ: ಎಲ್‌ಐಸಿ ಪ್ರತಿನಧಿಗಳ ಧರಣಿ, ಮನವಿ ಸಲ್ಲಿಕೆ

KannadaprabhaNewsNetwork | Published : Dec 10, 2024 12:31 AM

ಸಾರಾಂಶ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಫೆಡರೇಶನ್‌ನ ಉಡುಪಿ ವಿಭಾಗದ ನೇತೃತ್ವದಲ್ಲಿ ಜೀವ ವಿಮಾ ಪ್ರತಿನಿಧಿಗಳು ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕನಿಷ್ಠ ವಿಮಾ ಮೊತ್ತ 1 ಲಕ್ಷ ರು. ಮರುಜಾರಿ, ವಿಮಾ ಪಾಲಿಸಿ ಖರೀದಿಗೆ ಗರಿಷ್ಠ ವಯೋಮಿತಿ ಏರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಫೆಡರೇಶನ್‌ನ ಉಡುಪಿ ವಿಭಾಗದ ನೇತೃತ್ವದಲ್ಲಿ ಜೀವ ವಿಮಾ ಪ್ರತಿನಿಧಿಗಳು ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಸಿದರು.

ಜೀವ ವಿಮಾ ಪ್ರತಿನಿಧಿಗಳ ಭವಿಷ್ಯದ ದೃಷ್ಟಿಯಿಂದ ಎಲ್‌ಐಸಿಗೆ ಮಾರಕವಾಗಿರುವ ಕೆಲವೊಂದು ಬದಲಾವಣೆ ಶೀಘ್ರವೇ ನಿಲ್ಲಿಸಬೇಕು, ಹಿಂದಿನ ಕಮಿಷನ್ ದರ ಮರುಜಾರಿಗೊಳಿಸಬೇಕು. ಪ್ರೀಮಿಯಂ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು ಎಂದು ಜೀವ ವಿಮಾ ಪ್ರತಿನಿಧಿಗಳು ಆಗ್ರಹಿಸಿದರು.

ಸಂಘದ ಉಡುಪಿ ವಿಭಾಗೀಯ ಸಮಿತಿಯ ಅಧ್ಯಕ್ಷ ಎ. ವಿಶ್ವನಾಥ್ ಗಟ್ಟಿ ವಗ್ಗ ಮಾತನಾಡಿ, ಕಮಿಷನ್ ದರದ ಪುನರ್ ರಚನೆಯ ಹೆಸರಿನಲ್ಲಿ ನಿಗಮದ ಆಡಳಿತ ಮಂಡಳಿ ಪ್ರತಿನಿಧಿಗಳ ಒಟ್ಟಾರೆ ಕಮಿಷನ್ ಗಳಿಕೆಯಲ್ಲಿ ಕಡಿತಗೊಳಿಸಿದೆ. ಅದು ಅತೀ ಹೆಚ್ಚು ಪಾಲಿಸಿ ಮಾರಾಟ ಮಾಡುವ ಪ್ರತಿನಿಧಿಗಳನ್ನು ನಿರುತ್ಸಾಹಗೊಳಿಸುತ್ತಿದೆ. ಈ ಪ್ರಯತ್ನವನ್ನು ಬಲವಾಗಿ ಖಂಡಿಸುತ್ತಿದ್ದು, ಎಲ್ಲಾ ಪ್ರತಿನಿಧಿಗಳಿಗೆ ಸಮಾನವಾದ ಕಮಿಷನ್ ದರವನ್ನು ನೀಡುವ ಪ್ರಕ್ರಿಯೆ ಮುಂದುವರಿಸಬೇಕೆಂದರು.

ಪ್ರತಿಭಟನೆ ನಂತರ ಭಾರತೀಯ ಜೀವವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುಧೋಳ್ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ಉಡುಪಿ ವಿಭಾಗೀಯ ಸಮಿತಿಯ ಕಾರ್ಯದರ್ಶಿ ಎಚ್. ಸುಬ್ರಹ್ಮಣ್ಯ ಭಟ್, ಕೋಶಾಕಾರಿ ಗಂಗಾಧರ್ ಎನ್. ಕೋಟ್ಯಾನ್, ಕಾರ್ಯಕಾರಿ ಮಂಡಳಿಯ ಕಾಶಿನಾಥ ಪುತ್ರನ್, ಮಾಜಿ ಅಧ್ಯಕ್ಷರಾದ ಮುರುಳೀಧರ್ ಡಿ.ವಿ., ಶೇಖರ್ ಪೂಜಾರಿ, ವಂದನಾ ವಿಶ್ವನಾಥ, ಉಡುಪಿ ಶಾಖಾ ಅಧ್ಯಕ್ಷ ರಮೇಶ್ ಆಚಾರ್ಯ ಯು., ಕೋಶಾಕಾರಿ ಜಗದೀಶ್ ಶೆಟ್ಟಿ, ಗಣೇಶ್ ಮೇಸ್ತ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Share this article