ಉಡುಪಿಯ ಸಮುದ್ರ ತೀರದಲ್ಲಿ 21 ಕಿ.ಮೀ. ಹಾಫ್ ಮ್ಯಾರಥಾನ್
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಲೋಂಬಾರ್ಡ್ (ಮಿಷನ್) ಆಸ್ಪತ್ರೆಯ 101ನೇ ವಾರ್ಷಿಕೋತ್ಸವ ಮತ್ತು ಉಡುಪಿ ರನ್ನರ್ಸ್ ಕ್ಲಬ್‌ನ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಡಿ.1ರಂದು ಉಡುಪಿ ಮ್ಯಾರಥಾನ್ 2024 ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಸುಶೀಲ್ ಜತ್ತನ್ನ ಹಾಗೂ ಉಡುಪಿ ರನ್ನರ್ಸ್ ಕ್ಲಬ್ ಅಧ್ಯಕ್ಷ ಡಾ.ತಿಲಕ್ ಚಂದ್ರಪಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾಯಿಲೆಗಳು ಬಂದ ನಂತರ ಚಿಕಿತ್ಸೆ ನೀಡುವುದಕ್ಕಿಂತ, ಕಾಯಿಲೆ ಬರದಂತೆ ತಡೆಯುವುದು ಅಗತ್ಯ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡುವ ಧ್ಯೇಯದೊಂದಿಗೆ ಆಸ್ಪತ್ರೆಯು ಈ ಮ್ಯಾರಥಾನ್‌ಗೆ ಕೈಜೋಡಿಸಿದೆ ಎಂದು ಡಾ.ಜತ್ತನ್ನ ಹೇಳಿದರು.ಉಡುಪಿಯ ಸಮುದ್ರ ತೀರದಲ್ಲಿ 21 ಕಿ.ಮೀ ದೂರದ ಈ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ. ಸಮುದ್ರ ತೀರದ ಹಸಿರಿನ ನಡುವೆ ಈ ಮ್ಯಾರಥಾನ್ ನಡೆಯಲಿದ್ದು, ಆ ಮೂಲಕ ದೇಶದ ವಿವಿಧ ರಾಜ್ಯಗಳಿಂದ ಬರುವ ಕ್ರೀಡಾಪಟುಗಳಿಗೆ ಇಲ್ಲಿನ ಪ್ರಕೃತಿ ಸೌಂದರ್ಯ, ಪ್ರವಾಸಿ ತಾಣಗಳನ್ನು ಪರಿಚಯಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶವೂ ಈ ಮ್ಯಾರಥಾನ್ ಹಿಂದಿದೆ ಎಂದು ಡಾ. ತಿಲಕ್ ಚಂದ್ರಪಾಲ್ ತಿಳಿಸಿದರು.ಸ್ಪರ್ಧೆಯು ಅಂದು ಬೆಳಗ್ಗೆ 5 ಗಂಟೆಗೆ ಮಲ್ಪೆ ಸೀ ವಾಕ್‌ನಿಂದ ಆರಂಭವಾಗಿ, ಪಡುಕರೆ ಮಾರ್ಗವಾಗಿ ಉದ್ಯಾವರ ಮಟ್ಟುವರೆಗೆ ತೆರಳಿ ಅದೇ ರಸ್ತೆಯಲ್ಲಿ ಹಿಂದಕ್ಕೆ ಬಂದು ಸೀ ವಾಕ್‌ನಲ್ಲಿ ಸಮಾಪನಗೊಳ್ಳುತ್ತದೆ. ಈ ಮ್ಯಾರಥಾನ್‌ನಲ್ಲಿ ದೇಶಾದ್ಯಂತದಿಂದ ಸುಮಾರು 1500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 3 ಲಕ್ಷ ರು.ಗಳ ನಗದು ಬಹುಮಾನಗಳಿವೆ. ಪುರುಷರಿಗೆ, ಮಹಿಳೆಯರಿಗೆ 18, 36, 51 ವರ್ಷ ಮೇಲ್ಪಟ್ಟವರ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.18 ವರ್ಷ ಕಳೆಗಿನವರಿಗೆ 5 ಕಿ.ಮೀ. ಮತ್ತು 14 ವರ್ಷ ಕೆಳಗಿನವರಿಗೆ 3 ಕಿ.ಮೀ. ಸ್ಪರ್ಧೆಗಳೂ ಇರುತ್ತವೆ. ವಯಸ್ಸಿನ ಮಿತಿ ಇಲ್ಲದ 3 ಕಿ.ಮೀ. ರನ್ ಫಾರ್ ಫನ್ ಎಂಬ ಮುಕ್ತ ಸ್ಪರ್ಧೆ ಕೂಡ ಇರುತ್ತದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಇದ್ದು, ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ, ಹೆಚ್ಚು ಅಂಕ ಗಳಿಸುವ ಶಾಲೆಗಳಿಗೂ ಬಹುಮಾನ ನೀಡಲಾಗುತ್ತದೆ ಎಂದವರು ಹೇಳಿದರು.ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ನ. 21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 9844741471, 9886245661, 8105535847 ಈ ನಂಬರನ್ನು ಸಂಪರ್ಕಿಸಬಹುದು ಅಥವಾ ವೆಬ್ ಸೈಟ್‌ಗೆ ಭೇಟಿ ನೀಡಬಹುದು ಎಂದವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಕಾರ್ಯದರ್ಶಿ ದಿವಾಕರ್ ಗಣಪತಿ ನಾಯಕ್, ಉಪಾಧ್ಯಕ್ಷ ಎಚ್. ಉದಯ್ ಕುಮಾರ್ ಶೆಟ್ಟಿ, ಆಸ್ಪತ್ರೆಯ ಸಿಸ್ಟರ್ ದೀನಾ ಪ್ರಭಾವತಿ ಉಪಸ್ಥಿತರಿದ್ದರು.--------------ನ.24ರಂದು ಪ್ರೋಮೋ ರನ್
ವಿಶ್ವ ಮಧುಮೇಹ ದಿನದ ಅಂಗವಾಗಿ ನ.24ರಂದು ಲೋಂಬಾರ್ಡ್ ಆಸ್ಪತ್ರೆಯಿಂದ ಉಡುಪಿ ಪೇಟೆಯ ಸುತ್ತಮುತ್ತ ಮ್ಯಾರಥಾನ್ ಪೂರ್ವಭಾವಿಯಾಗಿ ಪ್ರೋಮೋ ರನ್ ಆಯೋಜಿಸಲಾಗುತ್ತಿದೆ ಎಂದು ಡಾ.ಸುಶೀಲ್ ಜತ್ತನ್ನ ತಿಳಿಸಿದ್ದಾರೆ.