ಕನ್ನಡಪ್ರಭ ವಾರ್ತೆ ಉಡುಪಿಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಾ.28ರಿಂದ ಏ.4ರ ವರೆಗೆ ನಾಮಪತ್ರ ಸಲ್ಲಿಕೆ, ಏ.5ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏ.8 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ನಿಷೇಧಿತ 100 ಮೀಟರ್ ಪರಿಧಿಯಲ್ಲಿ ಅಭ್ಯರ್ಥಿಯ ವಾಹನವನ್ನು ಒಳಗೊಂಡಂತೆ ಗರಿಷ್ಠ 3 ವಾಹನಗಳಿಗೆ ಮಾತ್ರ ಕಚೇರಿ ಅವರಣದಲ್ಲಿ ನಿಲುಗಡೆಗೆ ಅನುಮತಿ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ನಿಷೇಧಿತ 100 ಮೀಟರ್ ಪರಿಧಿಯಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಪ್ರವೇಶಿಸಲು ಅಭ್ಯರ್ಥಿಯನ್ನೂ ಒಳಗೊಂಡತೆ ಗರಿಷ್ಟ 5 ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ.
ಐದು ಮಂದಿಗಿಂತ ಹೆಚ್ಚು ಮಂದಿ ಗುಂಪುಗಾರಿಕೆ ನಡೆಸುವುದು, ಆಯುಧ/ಶಸ್ತ್ರಾಸ್ತ್ರಗಳು ಮತ್ತು ಮಾರಕಾಸ್ತ್ರಗಳನ್ನು ಹೊಂದಿರುಗುವುದನ್ನು ನಿರ್ಬಂಧಿಸಲಾಗಿದೆ. ನಾಮಪತ್ರ ಸಲ್ಲಿಸುವ ಕೇಂದ್ರದ ನಿಷೇಧಿತ 100 ಮೀಟರ್ ಪರಿಧಿಯಲ್ಲಿ ಚುನಾವಣೆ ಕಾರ್ಯದ ಮೇಲೆ ನಿರತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಭ್ಯರ್ಥಿಗಳು, ಅನುಮತಿ ಹೊಂದಿದ ರಕ್ಷಣಾ ಇಲಾಖೆಯವರು ಹಾಗೂ ಅನುಮತಿ ಪಡೆದ ಮಾಧ್ಯಮದವರು ಹೊರತುಪಡಿಸಿ ಉಳಿದ ಎಲ್ಲ ತರಹದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗ ತರುವ ರೀತಿಯಲ್ಲಿ ವರ್ತಿಸಬಾರದು. ಸಾರ್ವಜನಿಕ ಆಸ್ತಿಗಳನ್ನು ವಿರೂಪಗೊಳಿಸುವುದಾಗಲಿ ಅಥವಾ ನಷ್ಟಗೊಳಿಸುವುದನ್ನಾಗಲಿ ಮಾಡುವಂತಿಲ್ಲ.ಈ ಆದೇಶವು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಈ ಮೇಲ್ಕಂಡ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ 188 ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.