ಉಡುಪಿ: ಉಡುಪಿ ಜಿಲ್ಲೆಯ ಆಯ್ದ 71 ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ಉತ್ತಮ ಆರೋಗ್ಯ ಹೊಂದಲು ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಲು 30 ದಿನಗಳ ಉಚಿತ ‘ನವಚೇತನ ಶಿಬಿರ’ವನ್ನು ಆತ್ರಾಡಿಯಲ್ಲಿರುವ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಪರೀಕದಲ್ಲಿ ಜೂ. 1ರಿಂದ ನಡೆಸಲಾಯಿತು.
ಈ ಶಿಬಿರ ಬಹಳ ಯಶಸ್ವಿಯಾಗಿ 30 ದಿನಗಳನ್ನು ಪೂರೈಸಿ, ಇದರ ಸಮಾರೋಪ ಸಮಾರಂಭವನ್ನು ಅಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಹಾಗೂ ಉಡುಪಿಯ ಅಂತಾರಾಷ್ಟ್ರೀಯ ಕ್ರೀಡಪಟು ಅಭಿನ್ ದೇವಾಡಿಗ ಆಗಮಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಎಸ್ಪಿ ಸುಧಾಕರ್ ನಾಯಕ್, ಶಾಂತಿವನ ಟ್ರಸ್ಟ್ ನ ಸೀತಾರಾಮ್ ತೋಳ್ಪಡಿತ್ತಾಯ, ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ ಎಲ್ಲರನ್ನು ಗೌರವಿಸಲಾಯಿತು. ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಒಟ್ಟು 500 ಕೆ ಜಿ ತೂಕ ಕಳೆದುಕೊಂಡಿದ್ದು, ಪ್ರತಿಯೊಬ್ಬರು ತಲಾ 7 ಕೆ.ಜಿ.ಯಷ್ಟು ತೂಕ ಕಡಿಮೆ ಮಾಡಿಕೊಂಡಿರುತ್ತಾರೆ. ಎಲ್ಲಾ ಶಿಬಿರಾರ್ತಿಗಳು ತಮ್ಮ ಬಿಎಂಐ ಕಡಿಮೆ ಮಾಡಿಕೊಂಡಿರುತ್ತಾರೆ ಹಾಗೂ ಬಿಪಿ ಮತ್ತು ಶುಗರ್ ಗಳನ್ನು ಕೂಡ ಕಡಿಮೆ ಮಾಡಿಕೊಂಡಿರುತ್ತಾರೆ ಎಂದು ಮೂಲಗಳು ತಿಳಿಸಿವೆ.