ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಡುಪಿ ಜಿಲ್ಲೆಯ 868 ಅಸಹಾಯಕರಿಗೆ ಮಾಸಾಶನದ ನೆರವು ಹಾಗೂ 779 ವಿಶೇಷ ಚೇತನರಿಗೆ ಉಚಿತ ಸಲಕರಣೆಗಳ ವಿತರಣೆ ಮಾಡಲಾಗಿದೆ
ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಡುಪಿ ಜಿಲ್ಲೆಯ 868 ಅಸಹಾಯಕರಿಗೆ ಮಾಸಾಶನದ ನೆರವು ಹಾಗೂ 779 ವಿಶೇಷ ಚೇತನರಿಗೆ ಉಚಿತ ಸಲಕರಣೆಗಳ ವಿತರಣೆ ಮಾಡಲಾಗಿದೆ ಎಂದು ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹಾಗೂ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಲವಾರು ಕಾರಣಗಳಿಗೆ ತಮ್ಮ ವೃದ್ಧಾಪ್ಯದ ಜೀವನದಲ್ಲಿ ಆರೈಕೆ ಮಾಡುವವರು ಯಾರೂ ಇಲ್ಲದೆ ಅನಾಥರಾಗಿರುವ ಅದೆಷ್ಟೋ ಹಿರಿ ಜೀವಗಳಿಗೆ, ಇಳಿ ವಯಸ್ಸಿನಲ್ಲಿ ನಡೆದಾಡಲು, ದುಡಿಯಲು ಸಾಧ್ಯವಾಗದೇ, ಜೀವನ ನಿರ್ವಹಣೆ ಹಾಗೂ ಒಪ್ಪತ್ತಿನ ಊಟಕ್ಕೂ ಪರದಾಡುವವರಿಗೆ, ದೈನಂದಿನ ಜೀವನ ನಿರ್ವಹಣೆ ಸಮಸ್ಯೆಯೊಂದಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುವರಿಗೆ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಅವರು ‘ಮಾಸಾಶನ’ ಕಾರ್ಯಕ್ರಮವನ್ನು ಜಾರಿಗೆ ತಂದರು. ದುಡಿಯಲು ಶಕ್ತಿಯಿಲ್ಲದೇ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವನ ನಿರ್ವಹಣೆಗಾಗಿ ಪ್ರತೀ ತಿಂಗಳು ಸಂಸ್ಥೆಯಿಂದ ಮಾಸಾಶನ ನೀಡುವ ವ್ಯವಸ್ಥೆ ಇದಾಗಿದೆ.
ಇಂತಹ ಅಶಕ್ತರಿಗೆ ಪ್ರತೀ ತಿಂಗಳು 1,000 ದಿಂದ 3,000 ರು.ಗಳವರೆಗೆ ಮಾಸಾಶನ ಯೋಜನೆಯ ಮೂಲಕ ತಲುಪಿಸಲಾಗುತ್ತಿದೆ. ಇದರಂತೆ ಜಿಲ್ಲೆಯ 868 ಅಸಹಾಯಕ ವ್ಯಕ್ತಿಗಳಿಗೆ ಪ್ರತೀ ತಿಂಗಳು ಈ ಮಾಸಾಶನ ತಲುಪಿಸಿ ಅವರ ಜೀವನ ನಿರ್ವಹಣೆಗೆ ನೆರವನ್ನು ನೀಡಲಾಗುತ್ತಿದೆ.ಸಲಕರಣೆ ವಿತರಣೆ: ಹುಟ್ಟಿನಿಂದ, ಯೌವನದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಬೇರೆ ಬೇರೆ ಕಾರಣಗಳಿಂದ ಎಲ್ಲರಂತೆ ಬದುಕುವ ಸಾಮರ್ಥ್ಯವನ್ನು ಕಳೆದುಕೊಂಡಿರುವ, ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ನೀಡುವ ‘ಜನಮಂಗಲ’ ಎನ್ನುವ ಉದಾತ್ತ ಯೋಜನೆಯನ್ನು ಡಾ. ಹೆಗ್ಗಡೆ ಪ್ರಾರಂಭಿಸಿದರು. ಈ ಯೋಜನೆಯಲ್ಲಿ ಗಾಲಿ ಕುರ್ಚಿ, ಶೌಚಾಲಯದ ಬಳಕೆಗಾಗಿ ಗಾಲಿ ಕುರ್ಚಿ, ನೀರು ಹಾಸಿಗೆ, ನಡೆಗೋಲು ಮೊಣಕೈ ಊರುಗೋಲು ಮೊದಲಾದ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಯೋಜನೆಯನ್ವಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಅವರ ನಿರ್ದೇಶನದಂತೆ, ಇದುವರೆಗೆ ಜಿಲ್ಲೆಯಲ್ಲಿ 779 ಫಲಾನುಭವಿಗಳಿಗೆ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗಿದ್ದು, ಈ ಕಾರ್ಯಕ್ರಮ ವಿಶೇಷ ಚೇತನರ ಅತ್ಮಸ್ಥೆರ್ಯವನ್ನು ಹೆಚ್ಚಿಸಿ ಅವರ ದೈನಂದಿನ ಬದುಕಿಗೆ ನೆರವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.