ಕಸ ಗುಡಿಸ್ತಿದ್ದವನ ಬಳಿ 100 ಕೋಟಿ ರು. ಆಸ್ತಿ!

KannadaprabhaNewsNetwork |  
Published : Aug 01, 2025, 02:00 AM ISTUpdated : Aug 01, 2025, 05:19 AM IST
31ಕೆಪಿಎಲ್26 ಕಳಕಪ್ಪ ನಿಡಗುಂದಿ ಅವರು ಗುಂಪು ಮನೆಗಳು 31ಕೆಪಿಎಲ್27 ಕಳಕಪ್ಪ ನಿಡಗುಂದಿ 31ಕೆಪಿಎಲ್28 ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು | Kannada Prabha

ಸಾರಾಂಶ

ನಗರದ ಕೆಆರ್‌ಐಡಿಎಲ್‌ ನಲ್ಲಿ ಕೆಲ ವರ್ಷ ಹೊರಗುತ್ತಿಗೆ ಕಚೇರಿ ಸಹಾಯಕನಾಗಿ ಸೇವೆ ಸಲ್ಲಿಸಿದ್ದ   ಕಳಕಪ್ಪ  ಮನೆ ಮೇಲೆ ಲೋಕಾಯುಕ್ತ    ದಾಳಿ ನಡೆಸಿದ್ದು, ಈ ವೇಳೆ 24 ಮನೆಗಳು, 50 ನಿವೇಶನ, 40 ಎಕರೆ ಜಮೀನು, ಬಂಗಾರ, ಬೆಳ್ಳಿ ಸೇರಿದಂತೆ 100 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆ 

 ಕೊಪ್ಪಳ :  ನಗರದ ಕೆಆರ್‌ಐಡಿಎಲ್‌(ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ)ನಲ್ಲಿ ಕೆಲ ವರ್ಷ ಹೊರಗುತ್ತಿಗೆ ಕಚೇರಿ ಸಹಾಯಕನಾಗಿ ಸೇವೆ ಸಲ್ಲಿಸಿದ್ದ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕಳಕಪ್ಪ ನಿಡಗುಂದಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಈ ವೇಳೆ 24 ಮನೆಗಳು, 50 ನಿವೇಶನ, 40 ಎಕರೆ ಜಮೀನು, ಬಂಗಾರ, ಬೆಳ್ಳಿ ಸೇರಿದಂತೆ 100 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡ ಈತ, ನಂತರ ಕಚೇರಿ ಸಹಾಯಕ ಎಂದು ಹೊರಗುತ್ತಿಗೆ ಆಧಾರದಲ್ಲಿ ಕೆಆರ್‌ಐಡಿಎಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. 2003ರಿಂದ 2024ರ ಅವಧಿಯಲ್ಲಿ ಈತ ಕೊಪ್ಪಳ ಕೆಆರ್‌ಐಡಿಎಲ್ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದು, ಈ ಅವಧಿಯಲ್ಲಿ ಅಪಾರ ಆಸ್ತಿ ಗಳಿಸಿದ್ದಾನೆ ಎಂಬ ಆರೋಪ ಇತ್ತು. 

ಲೋಕಾಯುಕ್ತಕ್ಕೆ ದೂರು:

ಜಿಲ್ಲೆಯಲ್ಲಿ ಕೆಆರ್‌ಐಡಿಎಲ್ ಇಲಾಖೆಯಿಂದ 2022-24ರ ವರೆಗೆ ನಡೆದ ಕಾಮಗಾರಿಗಳಲ್ಲಿ ₹72 ಕೋಟಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯಕಾರ್ಯನಿರ್ವಾಹಕ ಎಂಜಿನಿಯರ್ ಝಡ್.ಎಂ.ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ಕಚೇರಿ ಸಹಾಯಕ ಕಳಕಪ್ಪ ನಿಡಗುಂದಿ ವಿರುದ್ಧ ದೂರು ದಾಖಲಾಗಿತ್ತು. ಈ ಅಕ್ರಮ ಕುರಿತು ಈಗಿನ ಕೆಆರ್‌ಐಡಿಎಲ್ ಅಧಿಕಾರಿಗಳೇ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಹೀಗಾಗಿ, ಇಬ್ಬರನ್ನೂ ಅಮಾನತು ಮಾಡಲಾಗಿತ್ತು. ಈ ಮಧ್ಯೆ, ಇಇ ಝಡ್ ಎಂ.ಚಿಂಚೋಳಿಕರ್ ಅವರು ನ್ಯಾಯಾಲಯದ ಮೂಲಕ ಅಮಾನತು ಆದೇಶಕ್ಕೆ ತಡೆಯಾಜ್ಞೆ ತಂದು ದಾವಣಗೆರೆಯ ಅದೇ ಇಲಾಖೆಯ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

2022-24ರಲ್ಲಿ, ಮೂರು ವರ್ಷದ ಅವಧಿಯಲ್ಲಿ ನಿಗಮದಲ್ಲಿ ನಡೆದ 108 ಕಾಮಗಾರಿಗಳಲ್ಲಿನ ₹72 ಕೋಟಿ ಅಕ್ರಮದಲ್ಲಿನ ಸೂತ್ರದಾರನೇ ಕಳಕಪ್ಪ ನಿಡಗುಂದಿ ಆಗಿದ್ದರಿಂದ ಗುರುವಾರ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳು ಭಾಗ್ಯನಗರ ಹಾಗೂ ಕೊಪ್ಪಳದಲ್ಲಿರುವ ಅವನ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಏನೇನು ಆಸ್ತಿ?:

ಅಂದಾಜಿನ ಪ್ರಕಾರ ಈತನ ಬಳಿ ₹100 ಕೋಟಿಗೂ ಅಧಿಕ ಆಸ್ತಿ ಇದೆ ಎನ್ನಲಾಗಿದೆ. ಕೊಪ್ಪಳ ಹಾಗೂ ಭಾಗ್ಯನಗರದಲ್ಲಿ 24 ಮನೆ ಈತನ ಹೆಸರಿನಲ್ಲಿವೆ. ಬಂಡಿ, ಹಿಟ್ನಾಳ್, ಹುಲಿಗಿ ಹಾಗೂ ಯಲಬುರ್ಗಾದಲ್ಲಿ 40 ಎಕರೆ ಜಮೀನು ಈತನ ಪತ್ನಿ, ತಮ್ಮ ಹಾಗೂ ಬಾಮೈದುನನ ಹೆಸರಿನಲ್ಲಿದೆ. ಜೊತೆಗೆ, 50 ನಿವೇಶನ, ಎರಡು ಕಾರು, ಎರಡು ಬೈಕ್, 350 ಗ್ರಾಂ ಬಂಗಾರ, 1.5 ಕೆಜಿ ಬೆಳ್ಳಿಯೂ ಸಿಕ್ಕಿದೆ. ಇವುಗಳ ಜೊತೆ ಈತ ಬೇನಾಮಿ ಆಸ್ತಿಯನ್ನೂ ಹೊಂದಿದ್ದಾನೆ ಎಂದು ತಿಳಿದು ಬಂದಿದೆ.

PREV
Read more Articles on

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು