ಬೆಂಗಳೂರು ನಗರದಲ್ಲಿ ಇಂದಿನಿಂದ ಆಟೋ ಪ್ರಯಾಣ ದರ ಮತ್ತಷ್ಟು ದುಬಾರಿ: ಕನಿಷ್ಠ ₹36ಕ್ಕೆ ಏರಿಕೆ

KannadaprabhaNewsNetwork |  
Published : Aug 01, 2025, 02:00 AM ISTUpdated : Aug 01, 2025, 07:41 AM IST
Bengauru auto fare hike

ಸಾರಾಂಶ

ನಗರದಲ್ಲಿ ಶುಕ್ರವಾರದಿಂದ ಆಟೋ ಪ್ರಯಾಣ ದರ ದುಬಾರಿಯಾಗಲಿದ್ದು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಅವರ ಆದೇಶದಂತೆ ಮೊದಲ 2 ಕಿಮೀ (ಕನಿಷ್ಠ ದರ) ಪ್ರಯಾಣಕ್ಕೆ 36 ರು. ಪಾವತಿಸಬೇಕಿದೆ.

 ಬೆಂಗಳೂರು :  ನಗರದಲ್ಲಿ ಶುಕ್ರವಾರದಿಂದ ಆಟೋ ಪ್ರಯಾಣ ದರ ದುಬಾರಿಯಾಗಲಿದ್ದು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಅವರ ಆದೇಶದಂತೆ ಮೊದಲ 2 ಕಿಮೀ (ಕನಿಷ್ಠ ದರ) ಪ್ರಯಾಣಕ್ಕೆ 36 ರು. ಪಾವತಿಸಬೇಕಿದೆ.

ಬಸ್‌, ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳದ ನಂತರ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರು ಮತ್ತು ಸಂಘಟನೆಗಳು ಆಗ್ರಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಕಳೆದ ಜು.14ರಂದು ಆಟೋ ಪ್ರಯಾಣ ದರ ಹೆಚ್ಚಿಸಿ ಆದೇಶಿದ್ದರು. ಈ ಆದೇಶವು ಶುಕ್ರವಾರದಿಂದ ಜಾರಿಗೆ ಬರಲಿದೆ.

ಇದರ ಪ್ರಕಾರ ಮೊದಲ 2 ಕಿಮೀ ಪ್ರಯಾಣದ ಮೊತ್ತವು 30 ರು.ನಿಂದ 36 ರು.ಗೆ ಹೆಚ್ಚಳವಾಗಲಿದೆ. ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರು.ನಿಂದ 18ರು.ಗೆ ಹೆಚ್ಚಿಸಲಾಗಿದೆ. ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರು.ನಿಂದ 10 ರು.ಗೆ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರು.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಇದೀಗ ಈ ಪರಿಷ್ಕೃತ ದರವು ಶುಕ್ರವಾರದಿಂದ ಅನ್ವಯವಾಗಲಿದ್ದು, ನಗರದಲ್ಲಿ ಆಟೋ ಪ್ರಯಾಣಕ್ಕೆ ಹೆಚ್ಚಳದ ದರ ಪಾವತಿಸಬೇಕಿದೆ. ಅಲ್ಲದೆ, ಈ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿ ಆಟೋಗಳಲ್ಲಿಯೂ ಪ್ರದರ್ಶಿಸಬೇಕು ಹಾಗೂ ಅಕ್ಟೋಬರ್‌ 10ರೊಳಗೆ (90 ದಿನ) ಮೀಟರ್‌ ಅನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದ್ದಾರೆ.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ