ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗಕ್ಕಾಗಿ ನಾಲ್ಕನೆಯ ಚಾಲಕ ರಹಿತ ರೈಲನ್ನು ಕೊಲ್ಕತ್ತಾದಿಂದ ತೀತಾಘರ್ ರೈಲ್ ಸಿಸ್ಟಂ ಲಿ. (ಟಿಆರ್‌ಎಸ್‌ಎಲ್) ರವಾನಿಸಿದ್ದು, ಇನ್ನೆರಡು ವಾರದಲ್ಲಿ ಬೆಂಗಳೂರು ತಲುಪಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು ಮೂರು ರೈಲುಗಳೊಂದಿಗೆ ಆಗಸ್ಟ್ 15 ಸುಮಾರಿಗೆ ಈ ಮಾರ್ಗ ತೆರೆಯಲು ಉದ್ದೇಶಿಸಿದೆ. ನಾಲ್ಕನೇ ರೈಲು ಶೀಘ್ರ ಬಂದರೂ ಕೂಡ ಹದಿನೈದು ದಿನಗಳ ಕಾಲ ವಿವಿಧ ತಪಾಸಣೆಗೆ ಒಳಪಡಬೇಕಾಗುತ್ತದೆ. ಹೀಗಾಗಿ ಈ ರೈಲು ತಕ್ಷಣಕ್ಕೆ ವಾಣಿಜ್ಯ ಸಂಚಾರಕ್ಕೆ ಲಭ್ಯ ಆಗುವುದಿಲ್ಲ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಆರು ಸೆಟ್ ಬೋಗಿಗಳು ತೀತಾಘರ್ ರೈಲ್ ಸಿಸ್ಟಂ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದೆ. ಬಳಿಕ ಹೆಬ್ಬಗೋಡಿ ಡಿಪೋದಲ್ಲಿ ಜೋಡಣೆ ಆಗಲಿದ್ದು, ತಾಂತ್ರಿಕ ಪರಿಶೀಲನೆ ಬಳಿಕ ಮೇನ್ ಲೈನ್‌ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗುವುದು ಎಂದು ತಿಳಿಸಿವೆ.
ಟಿಆರ್‌ಎಸ್‌ಎಲ್ ಆಗಸ್ಟ್ ಅಂತ್ಯಕ್ಕೆ ಐದನೇ ಹಾಗೂ ಸೆಪ್ಟೆಂಬರ್ ನಲ್ಲಿ ಆರನೇ ರೈಲನ್ನು ಬೆಂಗಳೂರಿಗೆ ಕಳಿಸುವ ಸಾಧ್ಯತೆಯಿದೆ. ಇವೆರಡು ರೈಲುಗಳ ನಿರ್ಮಾಣ ಬಹುತೇಕ ಅಂತಿಮ ಘಟ್ಟದಲ್ಲಿವೆ. ಕ್ಯಾಬಿನ್, ಎಂಜಿನ್ ಪ್ರಪಲ್ಶನ್ ಸಿಸ್ಟಂ ಸೇರಿ ಇತರೆ ಎಲೆಕ್ಟ್ರಿಕ್ ಉಪಕರಣಗಳ ಅಳವಡಿಕೆ ಅಂತಿಮ ಘಟ್ಟದಲ್ಲಿವೆ. ಇವನ್ನು ಬೆಂಗಳೂರಿಗೆ ಕಳಿಸುವ ಮುನ್ನ ಅಂತಿಮ ತಪಾಸಣೆ ಮಾಡಲಾಗುವುದು. ಇವುಗಳ ಸೇರ್ಪಡೆ ಮೂಲಕ ಹಳದಿ ಮಾರ್ಗದಲ್ಲಿ ರೈಲುಗಳ ಆವರ್ತನದ ನಡುವಿನ ಅವಧಿ ಹಂತ ಹಂತವಾಗಿ ಇಳಿಕೆಯಾಗಲಿದೆ. ಜತೆಗೆ ಚೀನಾದಿಂದ ಸುಮಾರು ಐದು ಬೋಗಿಗಳ ಹೊರಭಾಗ (ಕಾರ್ ಬಾಡಿ ಶೆಲ್) ಬರುತ್ತಿದ್ದು, ಅವನ್ನು ಜೋಡಣೆ ಮಾಡಿಕೊಳ್ಳಲಾಗುವುದು. ಒಟ್ಟಾರೆ, ಮುಂದಿನ ವರ್ಷ ಮಾರ್ಚ್ ಒಳಗಾಗಿ ಈ ಮಾರ್ಗಕ್ಕೆ ಬೇಕಾದ ಎಲ್ಲ 15 ರೈಲುಗಳು ಬರಲಿವೆ ಎಂದು ಬಿಎಂಆರ್‌ಸಿಎಲ್ ವಿಶ್ವಾಸ ವ್ಯಕ್ತಪಡಿಸಿದೆ.
ಕಳೆದ ವಾರ ಮೂರು ದಿನಗಳ ಕಾಲ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದ (18.82ಕಿಮೀ) ತಪಾಸಣೆ ಮಾಡಿರುವ ಮೆಟ್ರೋ ರೈಲು ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ನೇತೃತ್ವದ ತಂಡ (ದಕ್ಷಿಣ ವಲಯವು) ನಾಲ್ಕೈದು ದಿನಗಳಲ್ಲಿ ತಮ್ಮ ವರದಿಯನ್ನು ನೀಡುವ ಸಾಧ್ಯತೆಯಿದೆ. ಅವರ ವರದಿ ಆಧರಿಸಿ ಕೆಲ ಬದಲಾವಣೆ ಮಾಡಿಕೊಂಡು ಸಂಚಾರ ಆರಂಭಿಸಲಾಗುವುದು. 20 ನಿಮಿಷಕ್ಕೊಂದು ರೈಲನ್ನು ಓಡಿಸುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ಮುಂದಾಗುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದರು.