ಕಾಲ್ತುಳಿತಕ್ಕೆ ‘ಸಿಲುಕಿದ್ದ’ 3 ಐಪಿಎಸ್‌ಗೆ ಮತ್ತೆ ಹುದ್ದೆ

KannadaprabhaNewsNetwork |  
Published : Aug 01, 2025, 02:00 AM ISTUpdated : Aug 01, 2025, 06:01 AM IST
Police Commissioner B Dayanand (Photo/ANI)

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ತಮ್ಮ ಮೇಲೆ ಕೈಗೊಂಡಿದ್ದ ಅಮಾನತು ಕ್ರಮ ರದ್ದುಗೊಂಡ ಬೆನ್ನಲ್ಲೇ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿ.ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳಿಗೆ ಶುಕ್ರವಾರ ರಾಜ್ಯ ಸರ್ಕಾರ ಹುದ್ದೆ ನೀಡಿದೆ.

 ಬೆಂಗಳೂರು :  ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ತಮ್ಮ ಮೇಲೆ ಕೈಗೊಂಡಿದ್ದ ಅಮಾನತು ಕ್ರಮ ರದ್ದುಗೊಂಡ ಬೆನ್ನಲ್ಲೇ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿ.ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳಿಗೆ ಶುಕ್ರವಾರ ರಾಜ್ಯ ಸರ್ಕಾರ ಹುದ್ದೆ ನೀಡಿದೆ.

ಬಂದೀಖಾನೆ ಮತ್ತು ಸುಧಾರಣಾ ಸೇವಾ ಇಲಾಖೆ ಮುಖ್ಯಸ್ಥರಾಗಿ ದಯಾನಂದ್ ನೇಮಕಗೊಂಡಿದ್ದಾರೆ. ಆದರೆ ಸೇವಾ ಹಿರಿತನ ಆಧಾರದ ಮೇರೆಗೆ ಮುಂಬಡ್ತಿ ನಿರೀಕ್ಷೆಯಲ್ಲಿದ್ದ ಅವರಿಗೆ ತುಸು ನಿರಾಸೆಯಾಗಿದ್ದು, ಅವರ ಮುಂಬಡ್ತಿಯನ್ನು ಸರ್ಕಾರ ತಡೆ ಹಿಡಿದಿದೆ. ಹೀಗಾಗಿ ಕಾರಾಗೃಹ ಮುಖ್ಯಸ್ಥ ಹುದ್ದೆಯನ್ನು ಡಿಜಿಪಿಯಿಂದ ಎಡಿಜಿಪಿ ಹುದ್ದೆಗೆ ಕೆಳಗಿಳಿಸಿ ದಯಾನಂದ್ ಅವರಿಗೆ ನೀಡಲಾಗಿದೆ.

ಕಾರಾಗೃಹ ಇಲಾಖೆ ಮುಖ್ಯಸ್ಥರಾಗಿದ್ದ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಶುಕ್ರವಾರ ನಿವೃತ್ತರಾದರು. ಅವರಿಂದ ತೆರವಾದ ಸ್ಥಾನವನ್ನು ದಯಾನಂದ್ ಅವರಿಗೆ ನೀಡಲಾಗಿದೆ. ಇನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಹಾಗೂ ಗುಪ್ತದಳ ಎಸ್ಪಿಯಾಗಿ ಶೇಖರ್ ತೆಕ್ಕಣ್ಣನವರ್‌ ಅವರನ್ನು ಸರ್ಕಾರ ನೇಮಿಸಿದೆ.

ಜೂ.4ರಂದು ಐಪಿಎಲ್‌ ಪ್ರಶಸ್ತಿ ವಿಜೇತ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ (ಆರ್‌ಸಿಬಿ)ವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಕಾಲ್ತುಳಿತ ದುರ್ಘಟನೆ ಸಂಭವಿಸಿತ್ತು. ದುರಂತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಘಟನೆಗೆ ಭದ್ರತಾ ಲೋಪದ ಆರೋಪ ಮೇರೆಗೆ ಆಗಿನ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್, ಹೆಚ್ಚುವರಿ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ವಿಕಾಸ್ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿತ್ತು. ಎರಡು ದಿನಗಳ ಹಿಂದಷ್ಟೇ ವಿಕಾಸ್ ಕುಮಾರ್ ವಿಕಾಸ್ ಹೊರತುಪಡಿಸಿ ನಾಲ್ವರ ಅಮಾನತು ರದ್ದುಗೊಂಡಿತ್ತು. ಇದೀಗ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಆದೇಶ ರದ್ದುಪಡಿಸಿ ಐಎಸ್‌ಡಿಯಲ್ಲಿ ಹುದ್ದೆ ನೀಡಲಾಗಿದೆ.  

ಡಿಜಿಪಿ ಹುದ್ದೆಗೆ ಸಿಗದ ಮುಂಬಡ್ತಿ?

ಕಾಲ್ತುಳಿತ ದುರಂತ ಸಂಬಂಧ ಇಲಾಖಾ ವಿಚಾರಣೆ ಬಾಕಿ ಇರುವ ಕಾರಣ ಸೇವಾ ಹಿರಿತನದ ಮೇರೆಗೆ ಎಡಿಜಿಪಿ ದಯಾನಂದ್ ಅವರ ಡಿಜಿಪಿ ಹುದ್ದೆಗೆ ಮುಂಬಡ್ತಿಗೆ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ. ಕಾಲ್ತುಳಿತ ದುರಂತಕ್ಕೆ ಭದ್ರತಾ ಲೋಪದ ಆರೋಪದ ಮೇರೆಗೆ ಅಮಾನತುಗೊಂಡ ಪೊಲೀಸರ ವಿರುದ್ಧ ಇಲಾಖಾ ವಿಚಾರಣೆಗೆ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಇದೇ ಘಟನೆ ಸಂಬಂಧ ಸರ್ಕಾರಕ್ಕೆ ನ್ಯಾ.ಮೈಕಲ್ ಡಿ.ಕುನ್ಹಾ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗ ಸಹ ಪೊಲೀಸರ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿತ್ತು. ಅಲ್ಲದೆ ಐಪಿಎಸ್ ಅಧಿಕಾರಿಗಳ ಅಮಾನತು ರದ್ದು ಬಳಿಕ ಅವರ ಮುಂಬಡ್ತಿ ನೀಡಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕಿದೆ. ಹೀಗಾಗಿ ಕೆಲ ದಿನಗಳ ಮಟ್ಟಿಗೆ ದಯಾನಂದ್ ಅವರ ಮುಂಬಡ್ತಿಯನ್ನು ಸರ್ಕಾರ ನಿರ್ಬಂಧಿಸಿದೆ ಎಂದು ಮೂಲಗಳು ಹೇಳಿವೆ.

ಎರಡು ಡಿಜಿಪಿ ಹುದ್ದೆಗಳು ಖಾಲಿ:

ಎಡಿಜಿಪಿ ಅಧಿಕಾರಿಗಳ ಮುಂಬಡ್ತಿಗೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಎರಡು ಡಿಜಿಪಿ ಹುದ್ದೆಗಳು ಖಾಲಿ ಉಳಿದಿವೆ. ಡಿಜಿ-ಐಜಿಪಿ ಅಲೋಕ್ ಮೋಹನ್ ಹಾಗೂ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಂದ ತೆರವಾದ ಹುದ್ದೆಗಳಿಗೆ ಅಲೋಕ್ ಕುಮಾರ್ ಹಾಗೂ ದಯಾನಂದ್ ಅವರಿಗೆ ಪದೋನ್ನತಿ ಸಿಗಬೇಕಿತ್ತು. ಆದರೆ ಈ ಇಬ್ಬರ ಮುಂಬಡ್ತಿಗೂ ಇಲಾಖಾ ವಿಚಾರಣೆ ಅಡ್ಡಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ