ಉಡುಪಿ: ಮುಂದುವರಿದ ವರ್ಷಧಾರೆ, ಇನ್ನೂ ಎರಡು ದಿನ ಮಳೆ ಸಾಧ್ಯತೆ

KannadaprabhaNewsNetwork |  
Published : May 22, 2025, 12:53 AM IST
21ಮಳೆಹಾನಿ | Kannada Prabha

ಸಾರಾಂಶ

ಉಡುಪಿ ಜಿಲ್ಲೆಯಾದ್ಯಂತ ಬುಧವಾರವೂ ಉತ್ತಮ ಮಳೆಯಾಗಿದೆ. ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 105 ಮಿ.ಮೀ. ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

6 ಮನೆಗಳಿಗೆ ಹಾನಿ । ಸಮುದ್ರದಲ್ಲಿ ಭಾರಿ ಅಲೆ ಸೃಷ್ಟಿ । ದಡಕ್ಕೆ ಹಿಂದಿರುಗಿದ ಮೀನುಗಾರರು

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯಾದ್ಯಂತ ಬುಧವಾರವೂ ಉತ್ತಮ ಮಳೆಯಾಗಿದೆ. ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 105 ಮಿ.ಮೀ. ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬುಧವಾರ ರಾತ್ರಿಯಿಡೀ ಬಿಡದೇ ಸುರಿದ ಮಳೆಗೆ ಜಿಲ್ಲೆಯ ತಗ್ಗು ಕೃಷಿ ಪ್ರದೇಶಗಳಲ್ಲಿ, ನದಿಗಳಲ್ಲಿ ನೀರು ತುಂಬಿದ್ದು, ಬುಧವಾರ ಹಗಲಿನಲ್ಲಿ ಮಳೆ ಇಳಿಮುಖವಾಗಿತ್ತು. ಆದರೂ ಜಿಲ್ಲೆಯಲ್ಲಿ 6 ಮನೆಗಳಿಗೆ, 1 ದನದ ಹಟ್ಟಿಗೆ ಮತ್ತು 2 ಕೃಷಿ ತೋಟಗಳಿಗೆ ಹಾನಿಯಾಗಿದೆ.

ಅರಬ್ಬಿ ಸಮುದ್ರದಲ್ಲಿ ಭಾರೀ ಮಳೆಯಾಗುತಿದ್ದು, ವಿಪರೀತ ಗಾಳಿ ಬೀಸುತ್ತಿದೆ, ಇದರಿಂದ ಭಾರೀ ಗಾತ್ರದ ಅಲೆಗಳು ಸೃಷ್ಟಿಯಾಗಿವೆ ಎಂದು ವಾರದ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ತಿಳಿಸಿದ್ದಾರೆ. ಹವಾಮಾನ ಇಲಾಖೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಿರುವುದರಿಂದ, ಅದಾಗಲೇ ಸಮುದ್ರಕ್ಕೆ ತೆರಳಿರುವ ಮೀನುಗಾರರು ಗಾಳಿಮಳೆಯಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ದಡಕ್ಕೆ ಹಿಂತಿರುಗಿದ್ದಾರೆ.

ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ಸಿದ್ದಮ್ಮ ಶೆಟ್ಟಿ ಮತ್ತು ರಾಮ ನಾಯ್ಕ ಅವರ ಮನೆಗಳ ಮೇಲೆ ಮರ ಬಿದ್ದು ತಲಾ 10,000 ರು.ಗಳಷ್ಟು ನಷ್ಟ ಅಂದಾಜಿಸಲಾಗಿದೆ. ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಆಶಾ ಶೆಟ್ಟಿ ಅವರ ಮನೆಗೆ 15,000 ರು., ಹನೆಹಳ್ಳಿಗ್ರಾಮದ ಉದಯ ಅವರ ಮನೆಗೆ 20,000 ಮತ್ತು ಕಾರ್ಕಡ ಗ್ರಾಮದ ಗಿರಿಜ ಬಾಬು ಅವರ ಮನೆಗೆ 2,00,000 ರು. ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ವನಜ ಆಚಾರ್ಯ ಅವರ ಅಡಕೆ ತೋಟಕ್ಕೆ 20,000 ರು. ಮತ್ತು ಸಿದ್ಧು ಅವರ ಅಡಕೆ ತೋಟಕ್ಕೆ 15,000 ರು. ಇಲ್ಲಿನ ಅಂಪಾರು ಗ್ರಾಮದ ರಾಜೀವ ಪಂಗಡಗಾರ ಅವರ ಜಾನುವಾರು ಕೊಟ್ಟಿಗೆ ಮೇಲೆ ಗಾಳಿಯಿಂದ ಮರ ಬಿದ್ದು 10,000 ರು.ಗಳಷ್ಟು ನಷ್ಟ ಸಂಭವಿಸಿದೆ.

ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 104.70 ಮಿ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 80.90, ಕುಂದಾಪುರ 104, ಉಡುಪಿ 145.70, ಬೈಂದೂರು 104.10, ಬ್ರಹ್ಮಾವರ 152.50, ಕಾಪು 96.50, ಹೆಬ್ರಿ 79.30 ಮಿ.ಮೀ. ಮಳೆ ದಾಖಲಾಗಿದೆ.

------------

ಮಳೆಹಾನಿ ಪ್ರದೇಶಗಳಿಗೆ ಶಾಸಕ ಯಶ್‌ಪಾಲ್ ಭೇಟಿಮಂಗಳವಾರ ಸುರಿದ ಭಾರಿ ಮಳೆಯಿಂದ ಚರಂಡಿ ನೀರು ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿ ಸಮಸ್ಯೆ ಉಂಟಾದ ಲಕ್ಷ್ಮೀಂದ್ರ ನಗರ ಮತ್ತು ಮಣಿಪಾಲ ಕೈಗಾರಿಕಾ ಪ್ರದೇಶಕ್ಕೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಬುಧವಾರಕ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

ಲಕ್ಷ್ಮೀಂದ್ರ ನಗರದಲ್ಲಿ ಕಾಂಕ್ರಿಟ್ ರಸ್ತೆಯಿಂದ ಮುಚ್ಚಿದ್ದ ಭಾಗ ತೆರವು ಮಾಡಿ ಚರಂಡಿಗೆ ಸಂಕರ್ಪ ಕಲ್ಪಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದ್ದು, ಮಣಿಪಾಲ ಕೈಗಾರಿಕಾ ಪ್ರದೇಶ ಹಾಗೂ ನಗರ ಸಭಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಹಾಗೂ ಅಗಲ ಕಿರಿದಾಗಿರುವ ಚರಂಡಿಗಳನ್ನು ತಕ್ಷಣ ತೆರವು ಮಾಡಲು ಸೂಚನೆ ನೀಡಿದರು.

ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಭಾರತಿ ಪ್ರಶಾಂತ್, ಕಲ್ಪನ ಸುಧಾಮ, ಬಾಲಕೃಷ್ಣ ಶೆಟ್ಟಿ, ಅಶೋಕ್ ನಾಯ್ಕ್, ಚಂದ್ರಶೇಖರ್, ಗಿರಿಧರ ಆಚಾರ್ಯ, ದಿನೇಶ್ ಅಮೀನ್, ನಗರಸಭೆ ಅಧಿಕಾರಿಗಳು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು