ಕನ್ನಡಪ್ರಭ ವಾರ್ತೆ ಉಡುಪಿ
ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜೊತೆಗೆ ವಿಪರೀತ ಗಾಳಿಯೂ ಬೀಸುತ್ತಿದೆ. ಇದರಿಂದ ಕೆಲವು ಕಡೆಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯವಾಗಿದೆ.
ಬುಧವಾರ ರಾತ್ರಿಯ ಜಡಿಮಳೆಗೆ ಜಿಲ್ಲೆಯಲ್ಲಿ 12 ಮನೆಗಳಿಗೆ, 3 ಜಾನುವಾರು ಕೊಟ್ಟಿಗೆ ಮತ್ತು 3 ತೋಟಗಳಿಗೆ ಸಾಕಷ್ಟು ಹಾನಿಯಾಗಿದೆ.ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಭಾರತಿ ಎಂಬವರ ಮನೆಗೆ ಗಾಳಿ ಮಳೆಯಿಂದ 10,000 ರು., ಕಾವ್ರಾಡಿ ಗ್ರಾಮದ ಶಾರದ ಅವರ ಮನೆಗೆ 60,000 ರು., ಗಾಳಿಗೆ ಮರಗಳು ಬಿದ್ದು ಗುಜ್ಜಾಡಿ ಗ್ರಾಮದ ವಾಸುದೇವ ಶೇರೆಗಾರ ಅವರ ಜಾನುವಾರು ಕೊಟ್ಟಿಗೆ 15,000 ರು., ಹೆಂಗವಳ್ಳಿ ಗ್ರಾಮದ ಅಬೂಬಕ್ಕರ್ ಅವರ ಅಡಕೆ ಮರಗಳು ಉರುಳಿ 15,000 ರು., ಮೂಸ ಹರ್ಷದ್ ಅವರಿಗೆ 15,000 ರು.ಗಳಷ್ಟು ಹಾನಿಯಾಗಿದೆ.
ಕಾಪು ತಾಲೂಕಿನ ಮೂಳೂರು ಗ್ರಾಮದ ಉದಯ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು 40,000 ರು., ಇನ್ನಂಜೆ ಗ್ರಾಮದ ಅರುಣ್ ಕುಮಾರ್ ಮನೆಯ ಮೇಲೆ ಮರ ಬಿದ್ದು 45,000 ರು., ಕಳತ್ತೂರು ಗ್ರಾಮದ ಶಾಲಿನಿ ಮುಖಾರ್ತಿಅವರ ಮನೆಗೆ 40,000 ರು.ಗಳಷ್ಟು ನಷ್ಟವಾಗಿದೆ.
ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ ಪದ್ದು ಶೀನ ಅವರ ಮನೆಗೆ 25,000 ರು., ಪಾಂಡೇಶ್ವರ ಗ್ರಾಮದ ರೋಜಾ ಡಿ ಅಲ್ಮೇಡಾ ಅವರ ಮನೆಗೆ 30,000 ರು., ಹಂದಾಡಿ ಗ್ರಾಮದ ರಘುನಾಥ ನಾಯಕ್ ಬಿ. ಅವರ ಕೊಟ್ಟಿಗೆ 15,000 ಹಾನಿಯಾಗಿದೆ.
ಬುಧವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 119.50 ಮಿ.ಮೀ. ಮಳೆ ದಾಖಲಾಗಿದೆ. ಇದು ಈ ಬಾರಿಯ ಮಲೆಗಾಲದ ಅತೀ ಹೆಚ್ಚು ಮಳೆಯಾಗಿದೆ.
ಕರಾವಳಿಯಲ್ಲಿ ಇನ್ನೆರಡು ದಿನ (ಶುಕ್ರವಾರ - ಶನಿವಾರ) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಉಡುಪಿ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ.