ಉಡುಪಿ: ಶೀಘ್ರದಲ್ಲಿ ಉಡುಪಿಯ ಭಾಗಕ್ಕೆ ಕಾವಿ ಕಲೆಗೆ ಜಿಐ ಟ್ಯಾಗ್ ದೊರಕಲಿದೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದು ಕಾವಿ ಕಲೆ ಕಲಾವಿದ ಡಾ. ಜನಾರ್ದನ ಹಾವಂಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಹಾವಂಜೆ ಅವರು, ಈ ಕಾರ್ಯಾಗಾರದಲ್ಲಿ ದಿನಬಳಕೆಯ ವಸ್ತುಗಳಲ್ಲಿ ಕಾವಿ ಕಲೆಯ ವಿನ್ಯಾಸ ಮಾಡಲಾಗಿದೆ. ಇನ್ನಷ್ಟು ಪ್ರಯೋಗ ಪ್ರಯತ್ನಗಳು ಈ ಕಲೆಯನ್ನು ನಡೆಸಬೇಕಾಗಿದೆ. ಸ್ಥಳೀಯರು ಈ ದಿಸೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಹಾವಂಜೆ ಗ್ರಾ.ಪಂ. ಅಧ್ಯಕ್ಷೆ ಆಶಾ ಪೂಜಾರಿ ಅವರು, ನಮ್ಮ ಗ್ರಾಮದಲ್ಲಿ ಈ ರೀತಿಯ ಕಾರ್ಯಾಗಾರ ನಡೆಯುತ್ತಿರುವುದು ಮತ್ತು ಕಾವಿ ಕಲಾವಿದ ಜನಾರ್ದನ ಹಾವಂಜೆ ನಮ್ಮೂರಿಗೆ ಹೆಮ್ಮೆ. ಸ್ಥಳೀಯ ಕರಕುಶಲಕರ್ಮಿಗಳು ಇನ್ನಷ್ಟು ಈ ಕಲಾಪ್ರಕಾರದಲ್ಲಿ ತೊಡಗಿಸಿಕೊಂಡು ಕಲೆ ಹಾಗೂ ಆ ಮೂಲಕ ಗ್ರಾಮದ ಅಭಿವೃದ್ಧಿಯೂ ಆಗಲಿಎಂಬುದಾಗಿ ಹಾರೈಸಿದರು.ಕರಕುಶಲ ಅಭಿವೃದ್ಧಿ ಮಂಡಲಿಯ ಸಹ ನಿರ್ದೇಶಕಿ ರಾಜೇಶ್ವರಿ, ಪ್ರಸ್ತುತ ಅಳಿವಿನಂಚಿನ ಕಾವಿ ಕಲೆಯನ್ನು ಕರಾವಳಿಯ ಭಾಗದಲ್ಲಿ ಅದರಲ್ಲೂ ಉಡುಪಿಯ ಹಾವಂಜೆಯಲ್ಲಿ ಒಂದು ಸೆಕ್ಟರ್ ಆಗಿ ಬೆಳೆಸುತ್ತಿರುವುದು ಸಂತೋಷದ ಸಂಗತಿ, ಶೀಘ್ರ ಈ ಕಲೆಗೆ ಜಿಐ ಮಾನ್ಯತೆ ಸಿಗಲಿ ಎಂದರು.
ದೆಹಲಿಯ ಹಿರಿಯ ವಿನ್ಯಾಸಗಾರ ಬ್ರಿಜೇಶ್ ಜೈಸ್ವಾಲ್ ಈ ಕಾರ್ಯಾಗಾರದಲ್ಲಿ ಕಲಾವಿದರ ವಿನ್ಯಾಸಗಳ ಬೆಳವಣಿಗೆಗೆ ಸಹಕರಿಸಿದರು. ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜನಾರ್ದನ ಮೂಲ್ಯ, ನಿರ್ದೇಶಕ ಗಣೇಶ ಕುಲಾಲ್ ಹಾಗೂ ಶೇಷಪ್ಪ ಕುಲಾಲ, ಕಾವಿ ಆರ್ಟ್ ಫೌಂಡೇಶನ್‌ನ ಮಂಜುನಾಥ ರಾವ್ ಉಪಸ್ಥಿತರಿದ್ದರು.ಕೈಯಿಂದಲೇ ತಯಾರಿಸಿದ ವಿವಿಧ ರೀತಿಯ ಸ್ಮರಣಿಕೆಗಳು, ಮಣ್ಣಿನ ವಿವಿಧ ವಿನ್ಯಾಸಗಳ ಮಡಕೆ ಹಾಗೂ ಮಣ್ಣಿನಿಂದಲೇ ತಯಾರಿಸಿದ ಉತ್ಪನ್ನಗಳು, ಅಂಗಿ, ಕುರ್ತಾ, ದಿಂಬಿನ ಬಟ್ಟೆ, ಟೀ ಕೋಸ್ಟರ್, ಸ್ಮರಣಿಕೆ ಬಾಕ್ಸ್ ಹಾಗೂ ಮರದ ವಿವಿಧ ದಿನ ಬಳಕೆಯ ವಸ್ತುಗಳ ಮೇಲೆ ಕಾವಿ ಕಲೆಯ ವಿನ್ಯಾಸಗಳನ್ನು ಈ ಕಾರ್ಯಾಗಾರದಲ್ಲಿ ವಿನ್ಯಾಸಗೊಳಿಸಲಾಗಿತ್ತು.