ಕನ್ನಡಪ್ರಭ ವಾರ್ತೆ ಹನೂರು
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳ ಪೈಕಿ ಹನೂರು ತಾಲೂಕಿನಲ್ಲಿ ಹೆಚ್ಚು ಬರವಿದೆ. ಹನೂರು ತಾಲೂಕಿನ 53 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ರಾಮಾಪುರ ಹೋಬಳಿ ವ್ಯಾಪ್ತಿ ಬಹುತೇಕ ಗ್ರಾಮಗಳಲ್ಲಿ ಮಳೆ ಕೊರತೆಯಿಂದಾಗಿ ಬೆಳ್ಳುಳ್ಳಿ ಸೇರಿ ಇನ್ನಿತರ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದು, ರೈತರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಜಾನುವಾರುಗಳಿಗೆ ಮೇವಿಲ್ಲದೆ, ಜನರಿಗೆ ಕುಡಿಯುವ ನೀರಿಲ್ಲದೆ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಸಮಗ್ರವಾಗಿ ಬರಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ರೈತರ ಕಷ್ಟ ಆಲಿಸಬೇಕಿತ್ತು. ಆದರೆ ಕೇವಲ ಒಂದು ಗ್ರಾಮದ ಒಬ್ಬ ರೈತನ ಜಮೀನಿಗೆ ಭೇಟಿ ನೀಡಿ ಒಬ್ಬ ರೈತನನ್ನು ಮಾತನಾಡಿಸಿ ವಾಪಸ್ ಹೋಗಿದ್ದಾರೆ. ಇದರಿಂದ ಬರದ ನಿಜವಾದ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ಏನು ಮಾಹಿತಿ ಸಿಕ್ಕಿದೆ? ಇದು ರೈತರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.
490 ಕೋಟಿ ಘೋಷಣೆ ಕಾಗದಕ್ಕೆ ಸೀಮಿತ:ರಾಜ್ಯ ಬಜೆಟ್‌ನಲ್ಲಿ ಉಡುತೊರೆ ಹಳ್ಳ ಜಲಾಶಯದ ಏತ ನೀರಾವರಿ ಯೋಜನೆ ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ 490 ಕೋಟಿ ರು. ಘೋಷಣೆ ಮಾಡಲಾಗಿದೆ. ಘೋಷಣೆ ಮಾಡಿ ಆರು ತಿಂಗಳು ಕಳೆದರೂ ಇದುವರೆಗೂ ಒಂದು ರುಪಾಯಿ ಅನುದಾನ ಬಿಡುಗಡೆಯಾಗಿಲ್ಲ, ಕಾಮಗಾರಿ ಪ್ರಾರಂಭವಾಗಿಲ್ಲ. ಘೋಷಣೆ ಕೇವಲ ಬಜೆಟ್ ಭಾಷಣಕ್ಕೆ ಸೀಮಿತವಾಗಬಾರದು. ಈ ಕೂಡಲೇ ಅನುದಾನ ಬಿಡುಗಡೆ ಮಾಡಿ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಮಲೆ ಮಹದೇಶ್ವರ ಮಂಡಲ ಅಧ್ಯಕ್ಷ ಮುರುಗೇಶ್ ಮಾತನಾಡಿ, ರಾಮಾಪುರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ಪ್ರತಿನಿತ್ಯ ಉಂಟಾಗುತ್ತಿದ್ದು, ಜಾನುವಾರುಗಳು ಮೇವಿಲ್ಲದೆ ಪರಿತಪಿಸುತ್ತಿವೆ. ಕಾಡಂಚಿನ ಗ್ರಾಮಗಳ ಕಷ್ಟವನ್ನು ಕಂದಾಯ ಸಚಿವರು ಕೇಳಬೇಕಿತ್ತು. ಆದರೆ, ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಗ್ರಾಮಕ್ಕೆ ಮಾತ್ರ ಭೇಟಿ ನೀಡಿರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು.