ನಾಡಿನ ಕಾಲೇಜುಗಳಲ್ಲಿ ಜಾನಪದ ಜಾತ್ರೆ, ಹಬ್ಬ, ಯುವಜನೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಪ್ರಿಯಗೊಳ್ಳುತ್ತಿರುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸಲು ಸಹಕಾರಿ
ಬಳ್ಳಾರಿ: ಆಧುನಿಕತೆಯ ಅಬ್ಬರ ಹಾಗೂ ಮೊಬೈಲ್ ಹಾವಳಿ ನಡುವೆಯೂ ವಿದ್ಯಾರ್ಥಿ ಮತ್ತು ಯುವಜನರಲ್ಲಿ ನಾಡಿನ ಜಾನಪದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಒಲವು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಶ್ರೀಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸತೀಶ್ ಎ. ಹಿರೇಮಠ ಹರ್ಷ ವ್ಯಕ್ತಪಡಿಸಿದರು.
ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ನಾಡಿನ ಕಾಲೇಜುಗಳಲ್ಲಿ ಜಾನಪದ ಜಾತ್ರೆ, ಹಬ್ಬ, ಯುವಜನೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಪ್ರಿಯಗೊಳ್ಳುತ್ತಿರುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸಲು ಸಹಕಾರಿಯಾಗಿದೆ. ಬಿಇಡಿ ವ್ಯಾಸಂಗ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಸಾಹಿತ್ಯ, ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪರಿಚಯ, ಆಯೋಜನೆ ಮತ್ತು ಭಾಗವಹಿಸುವಿಕೆ ಅತ್ಯಗತ್ಯ. ಇಂತಹ ಚಟುವಟಿಕೆ ಅವರ ವ್ಯಕ್ತಿತ್ವ ವಿಕಸನಕ್ಕೂ ನೆರವಾಗಲಿವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಡಿಡಿಪಿಐ ಹಾಗೂ ಹಿರಿಯ ಸಾಹಿತಿ ಮಲ್ಲಿಕಾರ್ಜುನಸ್ವಾಮಿ ಹಿರೇಮಠ (ಮಹಿಮ) ಹಾಗೂ ತಹಸೀಲ್ದಾರ್ ವಿನಾಯಕ ಗೋಡಬೋಲೆ ಮಾತನಾಡಿದರು. ಸಂಘಟಕ ಎಸ್.ಎಂ. ಹುಲುಗಪ್ಪ ಅವರು ಬಳ್ಳಾರಿ ಜಿಲ್ಲೆಯ ಜಾನಪದ ಪರಂಪರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾಲೇಜಿನ 2026-27ನೇ ಸಾಲಿನ ಬಿಇಡಿ ಪ್ರಶಿಕ್ಷಣಾರ್ಥಿಗಳ ಪ್ರತಿನಿಧಿ ಒಕ್ಕೂಟ ರಚನೆಯ ಫಲಕ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಮಂಜುನಾಥ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಗೌಸಿಯಾ ಎಜ್ಯುಕೇಷನ್ ಮೈನಾರಿಟೀಸ್ ಸೊಸೈಟಿಯ ಕಾರ್ಯದರ್ಶಿ ತಾಜುದ್ದೀನ್ ಪಿ.,ಸೊಸೈಟಿ ಅಧ್ಯಕ್ಷೆ ಆಲ್ಮಸ್ ತಬಸಮ್, ಆಡಳಿತಾಧಿಕಾರಿ ಹಫೀಜಾ ಬೇಗಂ ಮತ್ತಿತರರು ಉಪಸ್ಥಿತರಿದ್ದರು. ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ನಡೆದ ಜಾನಪದ ಕಲಾ ಸಂಭ್ರಮ ಗಮನ ಸೆಳೆಯಿತು.
ಖ್ಯಾತ ಜಾನಪದ ಗಾಯಕ ಎಸ್.ಎಂ.ಹುಲುಗಪ್ಪ ಮತ್ತು ತಂಡ ಹಾಗೂ ಪ್ರಶಿಕ್ಷಣಾರ್ಥಿಗಳು ಜಾನಪದ ಗಾಯನ, ಜಾನಪದ ನೃತ್ಯ ಮತ್ತು ಸಮೂಹ ಗಾಯನ ಪ್ರಸ್ತುತಪಡಿಸಿದರು. ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಾಲೇಜಿನ ಪ್ರಾಚಾರ್ಯ ಡಾ.ಅಶ್ವರಾಮು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಮಂಜುನಾಥ, ಕವಿತಾ, ದೀಪಿಕಾ, ಸಹಾಯಕ ಪ್ರಾಧ್ಯಾಪಕ ಅಂಥೋನಿ.ಐ, ದೀಪಿಕಾ ಪ್ರಾರ್ಥಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ದೊಡ್ಡಬಸಪ್ಪ, ಹಂಪಮ್ಮ ಹಾಗೂ ಉಪನ್ಯಾಸಕಿ ನಾಗವೇಣಿ ಕಾರ್ಯಕ್ರಮ ನಿರ್ವಹಿಸಿದರು.