ಹುಲಿಗಿ ಗ್ರಾಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಭಕ್ತರ ಅನುಕೂಲಕ್ಕಾಗಿ 3 ಪ್ರತ್ಯೇಕ ಬಸ್ ನಿಲ್ದಾಣ ಗಳನ್ನು ನಿರ್ಮಿಸಲಾಗುವುದು ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ತಿಳಿಸಿದ್ದಾರೆ.

ಮುನಿರಾಬಾದ್: ಹುಲಿಗಿ ಗ್ರಾಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಭಕ್ತರ ಅನುಕೂಲಕ್ಕಾಗಿ 3 ಪ್ರತ್ಯೇಕ ಬಸ್ ನಿಲ್ದಾಣ ಗಳನ್ನು ನಿರ್ಮಿಸಲಾಗುವುದು ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಪ್ರತಿನಿತ್ಯ 10ರಿಂದ -15 ಸಾವಿರ ಭಕ್ತಾದಿಗಳು ಬಂದರೆ ಮಂಗಳವಾರ ಹಾಗೂ ಶುಕ್ರವಾರ 30 ರಿಂದ 50 ಸಾವಿರ ಭಕ್ತರು ಬರುತ್ತಾರೆ. ಇನ್ನು ಹುಣ್ಣಿಮೆ ದಿನಗಳಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ 3 ಲಕ್ಷ ದಾಟುತ್ತಿದೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಹುಬ್ಬಳಿ-ಧಾರವಾಡ ಕಡೆಯಿಂದ ಭಕ್ತರು ಬಸ್ಸಿನಲ್ಲಿ ಬರುತ್ತಾರೆ. ಇದಲ್ಲದೆ ವಿಜಯನಗರ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಕಡೆಯಿಂದ ಭಕ್ತರು ಬಸ್ಸಿನಲ್ಲಿ ಬರುತ್ತಾರೆ. ಎರಡು ಕಡೆಯಿಂದ ಬರುವ ಭಕ್ತಾದಿಗಳಿಗಾಗಿ ಹುಲಿಗಿ ಕ್ರಾಸ್ ಸಮೀಪ ತೋಟಗಾರಿಕೆ ಮಹಾವಿದ್ಯಾಲಯದ ಪಕ್ಕದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಹೊಸಪೇಟೆ ಕಡೆಯಿಂದ ಬರುವ ಭಕ್ತಾದಿಗಳಿಗಾಗಿ ಹುಲಿಗಿ ರೈಲ್ವೆ ಹಳಿ ಪಕ್ಕದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಕೊಪ್ಪಳ, ಸಿಂಧನೂರು, ಗಂಗಾವತಿ, ರಾಯಚೂರ ಕಡೆಯಿಂದ ಬರುವ ಭಕ್ತಾದಿಗಳಿಗಾಗಿ ಹಿಟ್ನಾಳ ರಸ್ತೆಯಲ್ಲಿ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಸಂಸದ ಹಿಟ್ನಾಳ್ ವಿವರಿಸಿದರು.

3 ನೂತನ ಬಸ್ ನಿಲ್ದಾಣಗಳ ನಿರ್ಮಾಣದಿಂದ ಹುಲಿಗಮ್ಮ ದೇವಸ್ಥಾನಕ್ಕೆ ರಾಜ್ಯದ ನಾನಾ ಕಡೆಗಳಿಂದ ಹಾಗೂ ಹೊರ ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಮುಂಬರುವ ದಿನಗಳಲ್ಲಿ ತುಂಬಾ ಅನುಕೂಲವಾಗಲಿದೆ ಎಂದರು.

ಏಜೆನ್ಸಿಗಳ ನೇಮಕ

ಹುಲಿಗೆಮ್ಮ ದೇವಸ್ಥಾನದಲ್ಲಿ ಸಿಬ್ಬಂದಿಯ ಕೊರತೆ ಇದೆ. ಕಾರ್ಯದರ್ಶಿಗಳು ದೇವಸ್ಥಾನದ ಪೂಜೆ, ದಾಸೋಹ ಹಾಗೂ ಭಕ್ತಾದಿಗಳ ದರ್ಶನದ ಕಡೆ ಗಮನಹರಿಸಬೇಕಾಗಿದೆ. ದೇವಸ್ಥಾನಕ್ಕೆ 30 ಎಕರೆಗಿಂತ ಅಧಿಕ ಜಾಗವಿದ್ದು ಇಷ್ಟೊಂದು ದೊಡ್ಡ ಪ್ರದೇಶದಲ್ಲಿ ಕೆಲವೇ ಕೆಲ ಸಿಬ್ಬಂದಿ ಸ್ವಚ್ಛತಾ ಕಾರ್ಯ ಮಾಡುವುದು ಕಷ್ಟಸಾಧ್ಯವಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಬೇರೆ ದೇವಸ್ಥಾನಗಳಲ್ಲಿ ಪ್ರತಿನಿತ್ಯ ನಿರ್ದಿಷ್ಟ ಪ್ರಮಾಣದಲ್ಲಿ ಭಕ್ತಾದಿಗಳು ಬರುತ್ತಾರೆ. ಆದರೆ ಹುಲಿಗೆಮ್ಮ ದೇವಸ್ಥಾನದ ವಿಷಯದಲ್ಲಿ ಹಾಗಿಲ್ಲ ಪ್ರತಿನಿತ್ಯ, ಮಂಗಳವಾರ ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ವೃದ್ಧಿಯಾಗುತ್ತದೆ, ದೇವಸ್ಥಾನದ ಬೆರಳೆಣಿಕೆಯಷ್ಟು ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಪ್ರತ್ಯೇಕವಾದ ಏಜೆನ್ಸಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ಈ ಕುರಿತಂತೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ 2-3 ಸ್ವಚ್ಛತಾ ಏಜೆನ್ಸಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಶೀಘ್ರದಲ್ಲಿ ಈ ಏಜೆನ್ಸಿಗಳೊಂದಿಗೆ ಮಾತನಾಡಿ, ದೇವಸ್ಥಾನ ಹಾಗೂ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಟೆಂಡರ್ ಪ್ರಕ್ರಿಯೆ ಮೂಲಕ ಒಂದು ಏಜೆನ್ಸಿ ನೇಮಕ ಮಾಡಲಾಗುವುದು ಎಂದು ಸಂಸದರು ವಿವರಿಸಿದರು.

ತುಂಗಾ ಆರತಿ

ಮಂಗಳವಾರ ಸೆಪ್ಟೆಂಬರ್ 8ರಂದು ಹುಲಿಗಿಯಲ್ಲಿ ನಡೆಯಲಿರುವ ತುಂಗಾ ಆರತಿ ನಿಮಿತ್ತ ಗ್ರಾಮದ ಮಹಿಳೆಯರಿಗೆ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಉಡಿ ತುಂಬು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಅಮ್ಮನವರ ಮೂರ್ತಿಯನ್ನು ವಾದ್ಯ ಮೇಳದೊಂದಿಗೆ ಕಳಸ ಹೊತ್ತ ಮಹಿಳೆಯರಿಂದ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ಅಮ್ಮನವರು ಉತ್ಸವ ಮೂರ್ತಿಯನ್ನು ನದಿ ಪಾತ್ರಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಿ ತುಂಗಾ ಆರತಿ ನೆರವೇರಿಸಲಾಗುವುದು ಎಂದು ಸಂಸದ ಹಿಟ್ನಾಳ ವಿವರಿಸಿದರು.