ಹಿರಿಯರ ಕಾಲದಿಂದಲೂ ತಮ್ಮದೇ ಹೆಸರು ಹೊಂದಿದ್ದ ಪಹಣಿಯ ಜಾಗದಲ್ಲಿ ಕೆಲವು ದಿನಗಳಿಂದ ಹೊಸವಾಳ ಗ್ರಾಮದ ರೈತರ ಪಹಣಿಯಲ್ಲಿ ಬ ಖರಾಬು (ಭೂಮಿಯು ಸಂಪೂರ್ಣವಾಗಿ ಸರ್ಕಾರದ ಅಧೀನದಲ್ಲಿರುತ್ತದೆ) ಎಂದು ದಾಖಲಾಗಿದ್ದು, ಕಂಗಾಲಾಗಿದ್ದಾರೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೊಸವಾಳದಲ್ಲಿ ರೈತರು ಮುಷ್ಕರಕ್ಕೆ ಕುಳಿತಿದ್ದಾರೆ.

ಧಾರವಾಡ:

ಧಾರವಾಡ-ಬೆಳಗಾವಿ ಮಧ್ಯೆ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ರಾಜ್ಯ ಸರ್ಕಾರ ಸುಮಾರು 6000 ಎಕರೆ ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದು, ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾರಿಡಾರ್‌ಗೆ ತಮ್ಮ ಫಲವತ್ತಾದ ಭೂಮಿ ನೀಡಲು ಒಂದೆಡೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಪಹಣಿಯಲ್ಲಿ ಬ ಖರಾಬ್‌ ಎಂದು ನಮೂದಾಗಿರುವುದು ನಿದ್ದೆಗೆಡಿಸಿದೆ.

ಹಿರಿಯರ ಕಾಲದಿಂದಲೂ ತಮ್ಮದೇ ಹೆಸರು ಹೊಂದಿದ್ದ ಪಹಣಿಯ ಜಾಗದಲ್ಲಿ ಕೆಲವು ದಿನಗಳಿಂದ ಹೊಸವಾಳ ಗ್ರಾಮದ ರೈತರ ಪಹಣಿಯಲ್ಲಿ ಬ ಖರಾಬು (ಭೂಮಿಯು ಸಂಪೂರ್ಣವಾಗಿ ಸರ್ಕಾರದ ಅಧೀನದಲ್ಲಿರುತ್ತದೆ) ಎಂದು ದಾಖಲಾಗಿದ್ದು, ಕಂಗಾಲಾಗಿದ್ದಾರೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೊಸವಾಳದಲ್ಲಿ ರೈತರು ಮುಷ್ಕರಕ್ಕೆ ಕುಳಿತಿದ್ದಾರೆ.

ಗ್ರಾಮದ ಸುತ್ತಲಿರುವ ಜಮೀನು ಅತ್ಯಂತ ಫಲವತ್ತತೆಯಿಂದ ಕೂಡಿದೆ. ಸುತ್ತಲೂ ಅರಣ್ಯ ಪ್ರದೇಶವೂ ಇದೆ. ಅಲ್ಲದೇ ಇಲ್ಲಿನ ಪರಿಸರ ಅದ್ಭುತವಾಗಿದೆ. ಆದರೆ, ಇದೀಗ ಈ ಪ್ರದೇಶವನ್ನು ಸ್ವಾಧೀಪಡಿಸಿಕೊಂಡು ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದನ್ನು ರೈತರು ತೀವ್ರವಾಗಿ ವಿರೋಧಿಸಿದ್ದಾರೆ. ವಿರೋಧದ ಮಧ್ಯೆಯೂ ಸರ್ಕಾರ 3500 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದು, ಇನ್ನುಳಿದ ಭೂಮಿ ಸ್ವಾಧೀನದ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೇ ವೇಳೆ ಬ ಖರಾಬು ಎಂಬುದು ಈ ಗ್ರಾಮದ ರೈತರ ನಿದ್ದೆ ಕೆಡಿಸಿದೆ. ಗ್ರಾಮದ ರೈತರ ಸುಮಾರು 270 ಎಕರೆ ಜಮೀನಿನಲ್ಲಿ ಬ ಖರಾಬು ಎಂದು ನಮೂದಾಗಿದೆ. ಇದರಿಂದ ನಮ್ಮ ಹಕ್ಕು ಏನೂ ಇಲ್ಲವಾದರೆ ಹೇಗೆ? ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರತಿಭಟನೆಗೆ ಕುಳಿತಿದ್ದೇವೆ ಎನ್ನುತ್ತಾರೆ ಹೊಸವಾಳದ ಪ್ರತಿಭಟನಾ ರೈತರು.

ಈ ಭೂಮಿಯನ್ನು ರೈತರು 80 ದಶಕದಲ್ಲಿ ಊಳುವವನೇ ಒಡೆಯ ಕಾನೂನಿನ ಅಡಿ ಪಡೆದಿದ್ದುಕೊಂಡಿದ್ದು, ಪೂರ್ವಜರು ಅನೇಕ ವರ್ಷಗಳ ಹಿಂದಿನಿಂದ ಇಲ್ಲಿ ಕೃಷಿ ಮಾಡಿಕೊಂಡು ಬಂದಿದ್ದರು. ಇದೀಗ ಪಹಣಿ ಪತ್ರಿಕೆಯಲ್ಲಿ ನಮ್ಮ ಹೆಸರು ಬದಲು ಬ ಖರಾಬು ಎಂದು ಹೇಗೆ ನಮೂದಾಯ್ತು ಎಂಬುದು ಅರ್ಥವಾಗುತ್ತಿಲ್ಲ. ಏತನ್ಮಧ್ಯೆ, ಇಲ್ಲಿಯ ಭೂಮಿಗೆ ಎಕರೆಗೆ ಸರ್ಕಾರ ₹ 45 ಲಕ್ಷ ನಿಗದಿಪಡಿಸಿದೆ. ಆದರೆ, ಅದಕ್ಕಿಂತಲೂ ಎರಡುಪಟ್ಟು ದರವಿದೆ. ಎಷ್ಟೋ ವರ್ಷಗಳ ಹಿಂದೆ ನಿಗದಿ ಮಾಡಲಾಗಿದ್ದ ದರಕ್ಕೆ ನಾವೇಕೆ ಭೂಮಿಯನ್ನು ಕೊಡಬೇಕು ಎನ್ನುವುದು ರೈತರ ಪ್ರಶ್ನೆ. ಹೀಗಾಗಿ ಸರ್ಕಾರ ಎಕರೆಗೆ ಕನಿಷ್ಠ ₹ 1 ಕೋಟಿ ಪರಿಹಾರ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಎಲ್ಲ ಬೇಡಿಕೆಗಳಿಗಾಗಿ ಕಳೆದ ಐದು ದಿನಗಳಿಂದ ಗ್ರಾಮದದಲ್ಲಿ ರೈತರು ಹಗಲು-ರಾತ್ರಿ ಧರಣಿ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ರೈತರೆಲ್ಲರೂ ಧರಣಿ ನಡೆಸುತ್ತಿದ್ದರೂ ಯಾವೊಬ್ಬ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಇತ್ತ ಸುಳಿಯುತ್ತಿಲ್ಲ ಎಂಬುದು ಸಹ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಕೂಡಲೇ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸಬೇಕು. ಪಹಣಿಯಲ್ಲಿ ಸರ್ಕಾರ ಮಾಡಿರುವ ತಪ್ಪನ್ನು ಸರಿಪಡಿಸಿ ಮೊದಲಿನಂತೆ ಹೊಲದ ಮಾಲೀಕರ ಹೆಸರುಗಳನ್ನು ಸೇರಿಸಬೇಕೆಂದು ರೈತರಾದ ಉದಯಕುಮಾರ, ಮೊಹಮ್ಮದ ಅಲಿ ಎಂಬುವರು ಆಗ್ರಹಿಸಿದರು.