ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರೈತರ ಪಾಲಿಗೆ ಅತೀ ಮುಖ್ಯವೆನಿಸಿದ ಚಾಂದ್ರಮಾನ ಯುಗಾದಿ ಹಬ್ಬ ವಿಶೇಷವಾಗಿ ತಾಲೂಕಿನ ಹಂಗಳ ಗ್ರಾಮದಲ್ಲಿ ಹೊನ್ನೇರು ಕಟ್ಟುವ ಮೂಲಕ ಭಾನುವಾರ ಬೆಳಗ್ಗೆ ಕೃಷಿಗೆ ನಾಂದಿ ಹಾಡಿದರು.ಹಂಗಳ ಗ್ರಾಮದಲ್ಲಿ ಬೀದಿ ಬೀದಿಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ರಂಗೋಲಿಗಳಿಂದ ಶೃಂಗರಿಸಲಾಗಿತ್ತು. ಹೊನ್ನೇರು ಹೊರುವ ಎತ್ತುಗಳನ್ನು ಹೂವುಗಳಿಂದ ಶೃಂಗರಿಸಿ ಮುತ್ತೈದೆಯರು ಆರತಿ ಬೆಳಗಿ ಸಂಭ್ರಮದಿಂದ ಯುಗಾದಿ ಆಚರಿಸಿದರು.
ಕೃಷಿಗೆ ಅತಿ ಮುಖ್ಯವಾದ ಯುಗಾದಿ ಹಬ್ಬವನ್ನು ರೈತರು ಹೊನ್ನೇರು ಹೇರುವ ಮೂಲಕ ಸಂಭ್ರಮದಿಂದಲೇ ಹಂಗಳ ಗ್ರಾಮದ ಸಾವಿರಾರು ರೈತರು ಹೊನ್ನೇರಿನಲ್ಲಿ ಭಾಗಿಯಾಗಿ ಸಂಭ್ರಮಿಸಿದರು.ಹಂಗಳ ಗ್ರಾಮದ ತುಂಬೆಲ್ಲ ಮಾವು-ಬೇವಿನ ತೋರಣಗಳನ್ನು ಕಟ್ಟಿ ರಾತ್ರೀ ಇಡೀ ಶೃಂಗರಿಸಿದ ನಂತರ ಮಹಿಳೆಯರು ಮನೆಯ ಮತ್ತು ದೇವಸ್ಥಾನದ ಮುಂಭಾಗ ಬಣ್ಣದ ರಂಗೋಲಿ ಇಟ್ಟು ಶೃಂಗರಿಸಿದ್ದರು. ಯುಗಾದಿ ಹಬ್ಬದ ದಿನದ ಮುಂಜಾನೆ ಮನೆಯ ಯಜಮಾನನೊಡಗೂಡಿ ಮಕ್ಕಳು ವರ್ಷವಿಡೀ ಸಂಗ್ರಹಿಸಿದ್ದ ದನದ ಸಗಣಿಯನ್ನು ಕುಕ್ಕೆಯಲ್ಲಿ ಇಟ್ಟು ಹೊನ್ನೇರುಗೆ ಪೂಜೆ ನೆರವೇರಿಸಿದರು.
ನಂತರ ವ್ಯವಸಾಯಕ್ಕೆ ರೈತರು ಬಳಸುವ ಎತ್ತುಗಳನ್ನು ಗಣಗಲೆ ಹೂವಿನಿಂದ ಶೃಂಗರಿಸಿದ ಎತ್ತುಗಳಿಗೆ ಮುತ್ತೈದೆಯರು ಅರಿಶಿಣ, ಕುಂಕುಮ ಇಟ್ಟು, ಮಾವಿನ ಸೊಪ್ಪಿನ ಹಾರ ಹಾಕಿ ಮನೆಯ ಹಿರಿಯ ಮುತ್ತೈದೆಯರು ಮೊದಲು ಪೂಜೆ ಸಲ್ಲಿಸಿದ ನಂತರ ಮನೆ ಮಂದಿಯಲ್ಲ ಎತ್ತುಗಳಿಗೆ ಪೂಜೆ ಸಲ್ಲಿಸಿದರು.ಎಲ್ಲರು ಕಟ್ಟುವಂಗಿಲ್ಲ:ಗ್ರಾಮದಲ್ಲಿ ಹೊನ್ನೇರನ್ನು ಗ್ರಾಮದ ಎಲ್ಲ ರೈತರು ಕಟ್ಟುವಂತಿಲ್ಲ. ಸಂಪ್ರದಾಯ ರೂಢಿಸಿಕೊಂಡು ಬಂದಿರುವ ಗ್ರಾಮದ ೧೨ ಕುಟುಂಬಗಳು ಮಾತ್ರವೇ ಮಾಡಬೇಕು. ಮಠದ ಹೊನ್ನೇರು ಮೊದಲ ಮೆರವಣಿಗೆ ಆರಂಭಿಸಿದ ನಂತರ ಉಳಿದ ೧೧ ಹೊನ್ನೇರು ಗ್ರಾಮದ ಆಯ್ದ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತೆರಳಿ ಜಮೀನಿಗೆ ತೆರಳಿದವು. ೧೨ ಹೊನ್ನೇರಿಗೆ ಯಾವುದೇ ಜಾತಿಯ ಕಟ್ಟು ಪಾಡುಗಳಲ್ಲ.ಗ್ರಾಮದ ಎಲ್ಲಾ ಕೋಮಿನ ಒಂದೊಂದು ಹೊನ್ನೇರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಇದು ಈ ಗ್ರಾಮದ ವಿಶೇಷ ಅಲ್ಲದೆ ಹೊಸ ಬಟ್ಟೆ ಬಹುತೇಕರು ತೊಟ್ಟಿದ್ದರು.
ತಾಲೂಕಿನ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ರೈತರು ಹೊನ್ನೇರು ಕಟ್ಟಿಕೊಂಡು ಜಮೀನಿಗೆ ತೆರಳಿ ನಾಲ್ಕೈದು ಸಾಲು ಉಳುಮೆ ಮಾಡುವ ಮೂಲಕ ಯುಗಾದಿ ಹಬ್ಬಕ್ಕೆ ಚಾಲನೆ ಕೊಟ್ಟರು.