ಸಿ,ಕೆ. ನಾಗರಾಜ
ಮರಿಯಮ್ಮನಹಳ್ಳಿ: ಯುಗಾದಿ ಹಬ್ಬವನ್ನು ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಆದರೆ ಮರಿಯಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಕೆಲ ಕುಟುಂಬಗಳಲ್ಲಿ ಹಬ್ಬದ ಸಡಗರ ಇಲ್ಲ. ಇಲ್ಲಿ ಯುಗಾದಿ ಆಚರಣೆಯೇ ನಿಷಿದ್ಧ. ಅಷ್ಟೇ ಅಲ್ಲ ಹಬ್ಬದಂದು ಸ್ನಾನ ಮಾಡುವುದಿಲ್ಲ. ತಲೆಗೆ ಎಣ್ಣೆ ಹಚ್ಚುವುದಿಲ್ಲ. ಹೊಸ ಬಟ್ಟೆ ಧರಿಸುವುದಿಲ್ಲ. ಸಿಹಿ ತಿನಿಸು ತಯಾರಿಸುವುದಿಲ್ಲ; ತಿನ್ನುವಂತಿಲ್ಲ.
ಹೌದು, ನಾರಾಯಣದೇವರಕೆರೆಯಿಂದ ಪುನರ್‌ವಸತಿಗೊಂಡಿರುವ ಮರಿಯಮ್ಮನಹಳ್ಳಿ, ಲೋಕಪ್ಪನಹೊಲ, ಲಡಕನಬಾವಿ, ಹಗರಿಬೊಮ್ಮನಹಳ್ಳಿಯ ರಾಮನಗರದಲ್ಲೂ ಈ ಪದ್ಧತಿ ನಡೆದುಬಂದಿದೆ. ಈ ಗ್ರಾಮಗಳ ಬಾರಿಕರು, ಅಗಸರು ಸೇರಿದಂತೆ ಕೆಲವು ಕುಟುಂಬಗಳಲ್ಲಿ ಯುಗಾದಿ ಹಬ್ಬ ನಿಷಿದ್ಧವಾಗಿದೆ!
ಮರಿಹಮ್ಮನಹಳ್ಳಿ, ಲೋಕಪ್ಪನಹೊಲ, ಲಡಕನಬಾವಿ, ಹಗರಿಬೊಮ್ಮನಹಳ್ಳಿಯಲ್ಲಿ ನಾಣಿಕೇರಿ ಜನರು ಸುಮಾರು 71 ವರ್ಷಗಳಿಂದ ವಾಸುತ್ತಿರುವ ಕೆಲ ಕುಟುಂಬಗಳು ಇದುವರೆಗೂ ತಮ್ಮ ಪೂರ್ವಿಕರು ಮಾಡಿಕೊಂಡ ಸಂಪ್ರದಾಯದಂತೆ ಹಲವು ದಶಕಗಳಿಂದ ಕೆಲ ಸಮುದಾಯದ ಕೆಲ ಕುಟುಂಬಗಳು ಯುಗಾದಿ ಹಬ್ಬ ಆಚರಿಸುತ್ತಿಲ್ಲ.
ಊರ ತುಂಬೆಲ್ಲ ಯುಗಾದಿ ಹಬ್ಬದ ಸಡಗರ ಸಂಭ್ರಮವಿದ್ದರೆ, ಈ ಊರಲ್ಲಿ ಕೆಲ ಕುಟುಂಬಗಳಲ್ಲಿ ಭಿನ್ನ ರೀತಿ. ಯುಗಾದಿ ಹಬ್ಬದಂದು ಸ್ನಾನ ಮಾಡುವುದಿಲ್ಲ. ತಲೆಗೆ ಎಣ್ಣೆ ಹಚ್ಚುವುದಿಲ್ಲ. ಹೊಸ ಬಟ್ಟೆ ಧರಿಸುವುದಿಲ್ಲ. ಸಿಹಿ ತಿನಿಸುಗಳನ್ನು ತಯಾರಿಸುವುದಿಲ್ಲ; ತಿನ್ನುವಂತಿಲ್ಲ. ಇದು ಅನೇಕ ತಲೆಮಾರುಗಳಿಂದ ನಡೆದು ಬಂದ ಸಂಪ್ರದಾಯ. ಅಷ್ಟಕ್ಕೂ ಈ ರೀತಿ ಆಚರಣೆಗೆ ಬಲವಾದ ಕಾರಣಗಳೇನೂ ಇಲ್ಲ. ಆದರೆ ತಲೆತಲಾಂತರಗಳಿಂದ ಇದನ್ನು ನಡೆಸಿಕೊಂಡು ಬಂದಿದ್ದಾರೆ.
ಒಂದು ವೇಳೆ ಹಿರಿಯರ ಮಾತು ಮೀರಿ ಯುಗಾದಿ ಆಚರಿಸಿದರೆ ಏನಾದರೂ ಕೇಡು ಉಂಟಾಗಬಹುದು ಎಂಬ ಭಯವೂ ಇವರಲ್ಲಿದೆ. ಈ ಹಿಂದೆ ಕೆಲ ಕುಟುಂಬಗಳಲ್ಲಿ ಯುಗಾದಿ ಹಬ್ಬದಂದು ಸಾವು-ನೋವಿನ ಅವಘಡಗಳು ನಡೆದಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಆಚರಿಸುತ್ತಿಲ್ಲ ಎನ್ನುವ ಮಾತುಗಳು ಹಿರಿಯರಿಂದ ಕೇಳಿ ಬರುತ್ತಿವೆ.
ಇನ್ನು ಕೆಲವರು ಹೇಳುವಂತೆ, ಈ ಹಿಂದೆ ನಾರಾಯಣದೇವರಕೆರೆಯಲ್ಲಿ ಯುಗಾದಿ ಹಬ್ಬದ ನಂತರ 9 ದಿನಕ್ಕೆ ಶ್ರೀರಾಮನವಮಿಯಂದು ಲಕ್ಷ್ಮೀನಾರಾಯಣಸ್ವಾಮಿ, ಆಂಜನೇಯಸ್ವಾಮಿ ಜೋಡು ರಥೋತ್ಸವ ನಡೆಯುತ್ತದೆ. ಇದು ಊರಿಗೇ ದೊಡ್ಡ ಜಾತ್ರೆಯಾಗಿರುವುದರಿಂದ ಯುಗಾದಿ ಹಬ್ಬ ಆಚರಿಸಿ ಮತ್ತೆ ಜೋಡು ರಥೋತ್ಸವ ಆಚರಿಸಬೇಕಾಗುತ್ತದೆ. ಒಂದು ವಾರದಲ್ಲೇ ಎರಡು ಎರಡು ಬಾರಿ ಹಬ್ಬ ಆಚರಿಸುವುದು ಕೆಲವು ಬಡವರಿಗೆ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಯುಗಾದಿ ಕೈಬಿಟ್ಟು ಜೋಡು ರಥೋತ್ಸವ ಆಚರಿಸೋಣ. ಈ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಎರಡು ಬಾರಿ ಹಬ್ಬದ ಖರ್ಚು ಭರಿಸಲಾಗದೇ ಮತ್ತು ಬೀಗರು-ಬಿಜ್ಜರನ್ನು ಕರೆಸಲಾಗದೇ ಯುಗಾದಿ ಹಬ್ಬ ಕೈ ಬಿಟ್ಟಿರಬಹುದು ಎನ್ನಲಾಗುತ್ತಿದೆ. ಆಗ ಸಾರಿಗೆ ಸಂಪರ್ಕ ಕೂಡ ವಿರಳವಾಗಿತ್ತು. ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಜೋಡು ರಥೋತ್ಸವ ಆಚರಣೆಗೆ ಹೆಚ್ಚು ಮಹತ್ವ ನೀಡಿರಬಹುದು ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ.
ಇಲ್ಲಿವರೆಗೂ ನಮ್ಮ ಪೂರ್ವಿಕರು ಯುಗಾದಿ ಆಚರಿಸಿಕೊಂಡು ಬಂದಿಲ್ಲ. ಹಾಗಾಗಿ ನಾವು ಆಚರಿಸುತ್ತಿಲ್ಲ. ಲಕ್ಷ್ಮೀನಾರಾಯಣಸ್ವಾಮಿ, ಆಂಜನೇಯಸ್ವಾಮಿ ಜೋಡಿ ರಥೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ, ಸಡಗರ ಸಂಭ್ರಮದಿಂದ ನಾವು ಆಚರಿಸುತ್ತೇವೆ ಎನ್ನುತ್ತಾರೆ ಜಿಪಂ ಮಾಜಿ ಸದಸ್ಯ ಗೋವಿಂದ ಪರಶುರಾಮ.