ಮಾರುಕಟ್ಟೆಯಲ್ಲಿ ಯುಗಾದಿ, ರಂಜಾನ್‌ ಖರೀದಿ ಭರಾಟೆ

KannadaprabhaNewsNetwork |  
Published : Mar 30, 2025, 03:04 AM IST
ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಯುಗಾದಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿರುವ ಜನತೆ. | Kannada Prabha

ಸಾರಾಂಶ

ಈ ಬಾರಿ ಯುಗಾದಿ, ರಂಜಾನ್‌ ಹಬ್ಬಗಳೆರಡೂ ಸೇರಿ ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ಮಾರುಕಟ್ಟೆಗಳು, ಅಂಗಡಿಗಳಲ್ಲಿ ಹೆಚ್ಚಿನ ಜನಜಂಗುಳಿ ಕಂಡು ಬಂದಿತು.

ಹುಬ್ಬಳ್ಳಿ: ಹಿಂದುಗಳ ಪಾಲಿಗೆ "ಯುಗಾದಿ " ಪ್ರಮುಖ ಹಬ್ಬ. ಇನ್ನು ಮುಸಲ್ಮಾನ್‌ ಬಾಂಧವರ ಪವಿತ್ರ ಹಬ್ಬ "ರಂಜಾನ್‌ " ಈ ಬಾರಿ ಎರಡೂ ಸೇರಿ ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ಮಾರುಕಟ್ಟೆಗಳು, ಅಂಗಡಿಗಳಲ್ಲಿ ಹೆಚ್ಚಿನ ಜನಜಂಗುಳಿ ಕಂಡು ಬಂದಿತು. ಹಬ್ಬಕ್ಕೆ ಬೇಕಾದ ಹಣ್ಣು, ಹೂವು ಸೇರಿದಂತೆ ಅಗತ್ಯ ವಸ್ತುಗಳನ್ನು ಜನ ಖರೀದಿಸಿದರು.

ಕೊಂಚ ಏರಿದ ಬೆಲೆ

ಸಾಮಾನ್ಯ ದಿನಗಳಲ್ಲಿ ಒಂದು ಮಾರು ಸೇವಂತಿಗೆ ಹೂವಿಗೆ ₹30-35 ಇರುತ್ತದೆ. ಆದರೆ, ಹಬ್ಬದ ಅಂಗವಾಗಿ ಸೇವಂತಿಗೆ ಹೂವಿನ ಬೆಲೆ ₹50ರಿಂದ ₹80, ಮಲ್ಲಿಗೆ ₹90-100 ಹಾಗೂ ಗುಲಾಬಿ ಒಂದಕ್ಕೆ ₹10, 2ಕ್ಕೆ 15 ಕಂಡುಬಂದಿತು. ಹಣ್ಣು-ತರಕಾರಿ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿರುವುದು ಕಂಡುಬಂದಿತು. ಪೂಜೆಗೆ ಬೇಕಾದ 5 ಬಗೆಯ ಹಣ್ಣುಗಳ ಬುಟ್ಟಿಗೆ ₹200ರಿಂದ ₹500ರ ವರೆಗೆ ಮಾರಾಟವಾದವು.

ಆಕರ್ಷಕ ಕೊಡುಗೆ

ಮಹಿಳೆಯರಿಗೆ ಪ್ರಿಯವಾದ ವಸ್ತು ಬಂಗಾರದ ಆಭರಣ, ಹಬ್ಬದ ಹಿನ್ನೆಲೆಯಲ್ಲಿ ಹಲವು ಆಭರಣ ಮಳಿಗೆಗಳಲ್ಲಿ ಆಕರ್ಷಕ ಕೊಡುಗೆ, ಗಿಫ್ಟ್ ಹ್ಯಾಂಪರ್ ಸೇರಿದಂತೆ ಹಲವು ರಿಯಾಯಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಆಭರಣದ ಅಂಗಡಿಗಳೆಲ್ಲ ಗ್ರಾಹಕರಿಂದ ತುಂಬಿಹೋಗಿದ್ದವು. ವಾಹನಗಳ ಶೋರೂಂಗಳಲ್ಲೂ ರಶ್‌ ಇದ್ದಿದ್ದು ಕಂಡು ಬಂತು

ಮಾರಾಟ ಇಳಿಕೆ

ವರ್ಷದ ಮೊದಲ ಸೂರ್ಯಗ್ರಹಣ ಅಮಾವಾಸ್ಯೆಯ ದಿನವಾದ ಶನಿವಾರವೇ ಇತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬೆಳಗಿನ ವೇಳೆ ಅಂಗಡಿಗಳಲ್ಲಿ ಖರೀದಿಸಲಿಲ್ಲ. ಸಂಜೆಯ ವೇಳೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟರು.

ರಂಜಾನ್‌ ಖರೀದಿಯೂ ಜೋರು

ತಿಂಗಳಿನಿಂದ ನಡೆಯುತ್ತಿರುವ ರಂಜಾನ್‌ ವ್ರತಾಚರಣೆ ಪೂರ್ಣಗೊಳ್ಳುವ ಸನಿಹಕ್ಕೆ ಬಂದಿದ್ದು, ಸೋಮವಾರ ಇಲ್ಲವೇ ಮಂಗಳವಾರ ರಂಜಾನ್‌ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮುಸಲ್ಮಾನ್‌ ಬಾಂಧವರು ಇಲ್ಲಿನ ಶಾಹ ಬಜಾರ್‌, ದುರ್ಗದಬೈಲ್‌ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಬಟ್ಟೆ, ಖಾದ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು. ಅಲ್ಪ ಬೆಲೆ ಏರಿಕೆ

ಬೆಲೆ ಏರಿಕೆಯಾದರೂ ಪೂಜಾ ಸಾಮಗ್ರಿ ಖರೀದಿಸಲೇ ಬೇಕು. ವರ್ಷಕ್ಕಿಂತ ಈ ವರ್ಷ ಅಲ್ಪ ಪ್ರಮಾಣದ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯಾದರೂ ಹಬ್ಬವನ್ನು ಭರ್ಜರಿಯಾಗಿ ಆಚರಿಸಬೇಕಲ್ಲವೆ. ಹಬ್ಬಕ್ಕೆ ಬೇಕಾದ ಎಲ್ಲ ಪೂಜಾ ಸಾಮಗ್ರಿ ಖರೀದಿಸುತ್ತಿದ್ದೇನೆ.

- ರೇಖಾ ಮರಿಲಿಂಗಣ್ಣವರ, ಹುಬ್ಬಳ್ಳಿ ನಿವಾಸಿಸಂತಸ

ಈ ಬಾರಿ ಯುಗಾದಿ, ರಂಜಾನ್‌ ಒಟ್ಟಿಗೆ ಬಂದಿರುವುದು ಸಂತಸ ತಂದಿದೆ. ನನಗೆ ಹಿಂದು, ಮುಸ್ಲಿಂ ಸ್ನೇಹಿತರಿದ್ದಾರೆ. ಭಾನುವಾರ ಹಿಂದೂ ಬಾಂಧವರೊಂದಿಗೆ ಯುಗಾದಿ ಆಚರಿಸುತ್ತೇನೆ. ಸೋಮವಾರ ಮುಸಲ್ಮಾನ್‌ ಬಾಂಧವರೊಂದಿಗೆ ರಂಜಾನ್‌ ಆಚರಿಸುವೆ.

- ಫಿರೋಜ್‌ ಮುಲ್ಲಾ, ಹಳೇ ಹುಬ್ಬಳ್ಳಿ ನಿವಾಸಿ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...