ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬುಡಕಟ್ಟು ಸಮುದಾಯದ ಬೇಡಗಂಪಣ ಅರ್ಚಕರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯ ಕಾರ್ಯಗಳನ್ನು ನಡೆಸಿಕೊಟ್ಟರು. ರಥೋತ್ಸವಕ್ಕೆ ಕುಂಕುಮ ಮಿಶ್ರಿತ ಅನ್ನವನ್ನು ತಯಾರಿಸಿ ಮಾದೇಶ್ವರನಿಗೆ ಪೂಜೆ ಸಲ್ಲಿಸಿ ದೇವಾಲಯದ ಒಂದು ಸುತ್ತು ಪ್ರದಕ್ಷಿಣೆ ಹಾಕಿ ನಂತರ ರಥದ ಚಕ್ರಗಳ ಮುಂದೆ ಕುಂಕುಮ ಮಿಶ್ರಿತ ಅನ್ನ ಇಟ್ಟು ಪೂಜೆ ಸಲ್ಲಿಲಾಯಿತು.
ಬಿಳಿ ಆನೆ ಉತ್ಸವ ಮೂರ್ತಿ: ಬುಡಕಟ್ಟು ಸಮುದಾಯದ ಬೇಡಗಂಪಣ ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ, ನಂತರ ಬಿಳಿ ಆನೆ ಉತ್ಸವ ಮೂರ್ತಿ ಪೂಜೆ ಸಲ್ಲಿಸಿ ದೇವಾಲಯದ ಪ್ರದಕ್ಷಿಣೆ ಹಾಕಿ ಪೂಜೆ ನಂತರ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಸಾಂಪ್ರದಾಯದಂತೆ ರಥಕ್ಕೆ ಪೂಜೆ ಸಲ್ಲಿಸಿದರು.ಉತ್ಸವ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಮುಗಿದ ನಂತರ ತೆಂಗಿನಕಾಯಿ ಹೊಡೆಯುವ ಮೂಲಕ ಬೆಳಗ್ಗೆ 7.30 ಕ್ಕೆ ಪ್ರಾರಂಭವಾದ ರಥೋತ್ಸವ ಒಂಬತ್ತು ಗಂಟೆವರೆಗೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿತು. ಕೊಂಬು ಕಹಳೆ, ಛತ್ರಿ ಚಾಮರ, ನಂದಿದ್ವಜ, ವಾದ್ಯ ಮೇಳಗಳೊಂದಿಗೆ ಹುಲಿವಾಹನ ಉತ್ಸವ ರುದ್ರಾಕ್ಷಿ ಮಂಟಪೋತ್ಸವ ಮಲೆ ಮಹದೇಶ್ವರ ಉತ್ಸವ ಮೂರ್ತಿ ಜೊತೆಗೆ ಬಸವ ವಾಹನ ಉತ್ಸವ ನಡೆಯಿತು.
ಕಳೆದ ನಾಲ್ಕು ದಿನಗಳಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ಯುಗಾದಿ ಜಾತ್ರೆಗೆ ನಾಲ್ಕು ದಿನಗಳಲ್ಲಿ 6 ಲಕ್ಷ ಭಕ್ತರು ಮಾದಪ್ಪನ ದರ್ಶನ ಪಡೆದು ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡಿದ್ದರು.ಶ್ರೀ ಕ್ಷೇತ್ರದಲ್ಲಿ ಯುಗಾದಿ ಜಾತ್ರೆಗೆ ಯಾವುದೇ ಸೌಲಭ್ಯ ಕೊರತೆ ಬರದಂತೆ ಹೆಚ್ಚಿನ ಬಂದೋಬಸ್ತ್ ಕಲ್ಪಿಸಿ ಹಿರಿಯ ನಾಗರಿಕರಿಗೂ ಸಹ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸಿ ಬಂದಂತ ಭಕ್ತಾದಿಗಳಿಗೆ ಕುಡಿಯುವ ನೀರು ಮತ್ತು ದಾಸೋಹ ವ್ಯವಸ್ಥೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.-ರಘು, ಕಾರ್ಯದರ್ಶಿಗಳು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟ