ನಟ ಸುದೀಪ್‌ ಅಪಮಾನಿಸಿದ ಉಗ್ರಪ್ಪ ನಡೆ ಖಂಡನಾರ್ಹ: ರಾಜೂಗೌಡ

KannadaprabhaNewsNetwork |  
Published : Oct 15, 2026, 01:15 AM IST
ಯಾದಗಿರಿ ಜಿಲ್ಲೆಯ ಕೊಡೇಕಲ್‌ನಲ್ಲಿ ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ನಡೆದ ರಾಜಾ ವೀರ ಮದಕರಿ ನಾಯಕ ಜಯಂತಿ ವೇಳೆ ನಟ, ಕಿಚ್ಚ ಸುದೀಪ್ ಬಗ್ಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ ಎಂದು ಮಾಜಿ ಸಚಿವ ರಾಜೂಗೌಡ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಚಿತ್ರದುರ್ಗದಲ್ಲಿ ನಡೆದ ರಾಜಾ ವೀರ ಮದಕರಿ ನಾಯಕ ಜಯಂತಿ ವೇಳೆ ನಟ, ಕಿಚ್ಚ ಸುದೀಪ್ ಬಗ್ಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ ಎಂದು ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ವಾಗ್ದಾಳಿ ನಡೆಸಿದರು.

ಕೊಡೇಕಲ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ರಾಜನಹಳ್ಳಿ ಗುರುಗಳು, ಶ್ರೀನಿವಾಸ್ ನಾಯಕ್ ಅವರು ಮತ್ತು ರಾಜಾ ವೀರ ಮದಕರಿ ನಾಯಕ ಜಯಂತಿ ಸಮಿತಿಯವರು ಸುದೀಪ್ ಅಣ್ಣನನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರಬೇಕು ಅಂತ ಹೇಳಿದ್ದರಿಂದ ಮನವಿ ಮೇರೆಗೆ ನಾವು ಚಿತ್ರದುರ್ಗಕ್ಕೆ ಕರೆದುಕೊಂಡು ಬಂದಿದ್ದೆವು. ಸುದೀಪ್ ಅವರೂ ಸಹ ಯಾವುದೇ ಬೇಡಿಕೆ ಇಡದೆ, ನಮ್ಮ ಸಮಾಜದ ಕಾರ್ಯಕ್ರಮ ಅಂತ ಪ್ರೀತಿಯಿಂದ ಬಂದಿದ್ದರು. ಹೆಲಿಕಾಪ್ಟರ್ ಬಂದಾಗ ಅಭಿಮಾನಿಗಳು ಹಾಗೂ ಜನರು "ಕಿಚ್ಚ, ಕಿಚ್ಚ, ಸುದೀಪ್, ಸುದೀಪ್ " ಅಂತ ಜೋಶ್‌ನಲ್ಲಿ ಕೂಗಿ, ಚಪ್ಪಾಳೆ ತಟ್ಟಿದ್ದಾರೆ. ಇದು ಅಭಿಮಾನಿಗಳ ಸಹಜ ನಡವಳಿಕೆ ಅದು. ಆದರೆ, ಅದನ್ನು ಸಹಿಸಿಕೊಳ್ಳಲಾಗದೆ ವೇದಿಕೆ ಮೇಲಿದ್ದ ಉಗ್ರಪ್ಪನವರು ಏಕವಚನದಲ್ಲಿ ಮನಬಂದಂತೆ ಮಾತನಾಡಿದ್ದು ತಪ್ಪು ಎಂದು ರಾಜೂಗೌಡ ಉಗ್ರಪ್ಪ ವಿರುದ್ಧ ವ್ಯಗ್ರರಾದರು.

ಸುದೀಪ್‌ ಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೆಸರು ಮಾಡಿದವರು. 33 ವರ್ಷಗಳಿಂದ ಯಾವುದೇ ಗಾಡ್‌ ಫಾದರ್ ಇಲ್ಲದೆ, ತನ್ನ ಸ್ವಂತ ಪರಿಶ್ರಮದಿಂದ, ಅಭಿನಯದಿಂದ ಇವತ್ತು ಅಭಿನಯ ಚಕ್ರವರ್ತಿ ಆಗಿದ್ದಾರೆ. ಕಲಾವಿದರಿಗೆ ಜಾತಿ ಇಲ್ಲ. ಆದರೆ ನಮ್ಮ ವಾಲ್ಮೀಕಿ ಸಮಾಜದಲ್ಲಿ ಇಂತಹ ಒಬ್ಬ ದೊಡ್ಡ ನಟ ಹುಟ್ಟಿದ್ದಾನೆ ಅನ್ನೋದು ನಮಗೆ ಹೆಮ್ಮೆ. ಹಿರಿಯರಾದ ಉಗ್ರಪ್ಪನವರು ಈ ಕಾರ್ಯಕ್ರಮದಲ್ಲಿ ಸುಖಾಸುಮ್ಮನೆ ಒಬ್ಬ ಕಲಾವಿದನನ್ನು ಎಳೆದು ತಂದು ರಾಜಕೀಯ ಮಾಡಿರುವುದು ಸರಿಯಲ್ಲ, ಕೂಡಲೇ ಸುದೀಪ್‌ ಮತ್ತು ವಾಲ್ಮೀಕಿ ಸಮಾಜಕ್ಕೆ ಉಗ್ರಪ್ಪ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮಾಜದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜೂಗೌಡ ಎಚ್ಚರಿಸಿದರು.

ವಿ. ಎಸ್. ಉಗ್ರಪ್ಪನವರು ನಮಗೆ ಹಿರಿಯರು. ಸೀನಿಯರ್ ವಕೀಲರು ಹಾಗೂ ಸೀನಿಯರ್ ನಾಯಕರು. ಅವರಿಗೆ ನಾವು ಗೌರವ ಕೊಡುತ್ತೇವೆ. ವೇದಿಕೆ ಮೇಲೆ ಸುದೀಪ್ ಅವರು ಇಲ್ಲದ ಸಮಯ ನೋಡಿಕೊಂಡು ಉಗ್ರಪ್ಪನವರು ಮೈಕ್ ತಗೊಂಡು ''''''''ಏಯ್, ನೀನು ಯಾರು, ಅವನಾಗಿದ್ರೆ, ಇವನಾಗಿದ್ರೆ.'''''''' ಅಂತ ಏಕವಚನದಲ್ಲಿ ಮಾತನಾಡಿದ್ದಾರೆ. ಮುಂದುವರಿದು "ಸುರಪುರ ಎಸ್ಟಿ ಮೀಸಲು ಕ್ಷೇತ್ರದಿಂದ ಎಂಎಲ್‌ಎ ಗೆ ನಿಲ್ಲುತ್ತಾನಾ? ಬಳ್ಳಾರಿಯಿಂದ ನಿಲ್ಲುತ್ತಾನಾ?'''''''' ಅಂತ. ಸುದೀಪ್ ಅಣ್ಣ ಯಾವತ್ತಾದರೂ ಹೋಗಿ ನನಗೆ ಜಾತಿ ಸರ್ಟಿಫಿಕೇಟ್ ಕೊಡಿ, ನನಗೆ ಟಿಕೆಟ್ ಕೊಡಿ ಅಂತ ನಿಮ್ಮ ಹತ್ತಿರ, ನಮ್ಮ ಹತ್ತಿರ ಕೇಳಿದ್ದಾರಾ? ಇಲ್ಲ. ಅವರು ಕಲಾವಿದರಾಗಿ ಬಂದಿದ್ದು. ನೀವು ರಾಜಾ ವೀರ ಮದಕರಿ ನಾಯಕರ ಜಯಂತಿ ಮಾಡ್ತಿದ್ದೀರಿ, ಅಲ್ಲಿ ನೀವು ಮೀಸಲಾತಿ ಬಗ್ಗೆ ಮಾತನಾಡುತ್ತೀರಿ ಎಂದು ಉಗ್ರಪ್ಪನವರ ವಿರುದ್ಧ ರಾಜೂಗೌಡ ವಾಗ್ದಾಳಿ ನಡೆಸಿದರು.

ಮೀಸಲಾತಿ ಬಗ್ಗೆ ಮಾತನಾಡೋ ನೈತಿಕ ಹಕ್ಕು ಕಾಂಗ್ರೆಸ್‌ನವರಿಗೆ, ಉಗ್ರಪ್ಪನವರಿಗೆ ಇದೆಯಾ? ಎಂದು ಪ್ರಶ್ನಿಸಿದ ರಾಜೂಗೌಡ, ಈ ಶೇ.7 ಮೀಸಲಾತಿ ಹೆಚ್ಚಿಸಿದ್ದು ಯಾರು? ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ. ಶ್ರೀರಾಮುಲು ಅವರು, ಜನಾರ್ದನ ರೆಡ್ಡಿ ಅವರು ಹೋರಾಟ ಮಾಡಿ ಕೊಡಿಸಿದ್ದು. ನೀವು ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ, ನೀವು ಸಂಸದರು, ಶಾಸಕರು ಆಗಿದ್ದಾಗ ಏನು ಮಾಡಿದ್ದೀರಿ? ಎಂದು ಟೀಕಿಸಿದರು.

"ನಿಮ್ಮ ಮಗನೇ ನಿಮ್ಮ ಮಾತು ಕೇಳುವುದಿಲ್ಲ ಅಂತ ಜನ ಮಾತನಾಡಿಕೊಳ್ಳುತ್ತಾರೆ. ನೀವು ಇನ್ನೊಬ್ಬರ ಮಗನ ಬಗ್ಗೆ, ಇನ್ನೊಬ್ಬರ ಕುಟುಂಬದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಉಗ್ರಪ್ಪಗೆ ಸಲಹೆ ನೀಡಿದ ರಾಜೂಗೌಡ, ಹಿರಿಯರಾಗಿ ಘನತೆ ಇಟ್ಟುಕೊಂಡು ಮಾತನಾಡಬೇಕು. ಮನೆಗೆ ಬಂದ ಅತಿಥಿ ದೇವರಿಗೆ ಸಮಾನ, ಅವರಿಗೆ ಗೌರವ ಕೊಡಬೇಕು. ಸುದೀಪ್ ಅವರು ಆ ವೇದಿಕೆಯಲ್ಲಿ ''''''''ನಾನು ವಾಲ್ಮೀಕಿ ಸಮಾಜದವನು, ಇದು ನನ್ನ ಸಮುದಾಯ, ಮದಕರಿ ನಾಯಕ ನಮ್ಮ ಹೆಮ್ಮೆ'''''''' ಅಂತ ಹೇಳಿದ್ದಾರೆ. ಅಂತಹವರನ್ನು ನೀವು ಅವಮಾನ ಮಾಡಿದ್ದೀರಿ, ಸುಮ್ಮನೆ ಒಬ್ಬ ಕಲಾವಿದನನ್ನು ಎಳೆದು ತಂದು ರಾಜಕೀಯ ಮಾಡಬೇಡಿ ಎಂದು ಕಿಡಿ ಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ತಿಪ್ಪೆಯಲ್ಲಿ ಅವಧಿ ಮುಗಿದ ಔಷಧಿ ಡಬ್ಬಿಗಳು ಪತ್ತೆ
ಟಿಎಲ್‌ಬಿಸಿ ಮೇಲ್ಭಾಗ ನೀರಿನ ಕಳ್ಳಾಟ ಬಯಲು