ರಾಮನಗರ: ನಗರದ ವಾರ್ಡುಗಳಲ್ಲಿ ಯುಐಡಿಎಫ್ (Urban Infrastructure Development Fund) ಅನುದಾನದ ಅಡಿಯಲ್ಲಿ ಕೈಗೆತ್ತಿಗೊಂಡಿರುವ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಶೇಕಡ 15ರಷ್ಟು ಮಾತ್ರ ಪ್ರಗತಿ ಸಾಧಿಸದಿರುವುದಕ್ಕೆ ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ಯುಐಡಿಎಫ್ ನ 82 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಂಡಿರುವ ಮೂರು ಹಂತದ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಅನುದಾನ ಬೇಕಿದ್ದರೆ ಒದಗಿಸಿಕೊಡುತ್ತೇನೆ. ಅದಕ್ಕಾಗಿ ಪ್ರಸ್ತಾವನೆ ಸಲ್ಲಿಸಿ, ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.ಯುಐಡಿಎಫ್ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ 43.5 ಕಿ.ಮಿ ಕಾಂಕ್ರೀಟ್ ರಸ್ತೆ ಪೈಕಿ ಈವರೆಗೆ 7.5 ಕಿ.ಮೀ ಕಾಮಗಾರಿ ಮುಕ್ತಾಯಗೊಂಡಿದೆ. ನೈಸ್ ರಸ್ತೆಯಲ್ಲಿನ ಲ್ಯಾಂಡ್ ಪಿಲ್ಲಿಂಗ್ ಸಮಸ್ಯೆ, ಬ್ರಿಡ್ಜ್,1500 ಮೀಟರ್ ತಡೆಗೋಡೆ ಕೆಲಸ ಮುಗಿದಿದೆ ಎಂದು ಎಂಜಿನಿಯರ್ ಪವಿತ್ರ ಮಾಹಿತಿ ನೀಡಿದರು.
ಕೆಲ ವಾರ್ಡುಗಳಲ್ಲಿ ಒಳಚರಂಡಿ ಕಾಮಗಾರಿ ಆಗದಿರುವುದು, ಕಿರಿದಾದ ರಸ್ತೆಗಳು, ಪೈಪ್‌ಲೈನ್ ಲೀಕೇಜ್‌ನಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗುತ್ತಿಗೆದಾರರು ಪ್ರಸ್ತಾಪಿಸಿದರು. ಅದಕ್ಕೆ ಶಾಸಕರು, ಸಾಕಷ್ಡು ಅನುದಾನ ಲಭ್ಯವಿದೆ. ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ತರುತ್ತೇನೆ. ನಗರದ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸೋಣ ಎಂದು ತಿಳಿಸಿದರು.ಕೆಲವು ವಾರ್ಡ್ ಗಳಲ್ಲಿ ಯುಜಿಡಿ ಡಿಪಿಆರ್ ಸರ್ವೆ ಮಾಡಿದ್ದು 32 ಕೋಟಿ ತಗಲುತ್ತದೆ. ಇನ್ನೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲಿ. ನನ್ನ ಬಳಿ 11 ಕೋಟಿ ರೂ ಅನುದಾನವಿದ್ದು, ಅದನ್ನು ಯುಜಿಡಿ ಕೆಲಸಕ್ಕೆ ಬಳಸಿ ಎಂದು ಶಾಸಕರು ಸೂಚಿಸಿದರು.
ನಗರದ ಮಧ್ಯೆ ಹಾದು ಹೋಗಿರುವ ಅರ್ಕಾವತಿ ನದಿಗೆ ಯುಜಿಡಿ ನೀರು ಸೇರುತ್ತಿದೆ. ಸುಮಾರು 11 ಲೀಕೇಜ್ ಪಾಯಿಂಟ್ ಗಳಿದ್ದು, ಅವುಗಳನ್ನು ನಿಯಂತ್ರಣ ಮಾಡಿ ಅರ್ಕಾವತಿ ಸೇರದಂತೆ ಕ್ರಮ ವಹಿಸಬೇಕು ಎಂದು ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಸಿಂಗ್ರಾಬೋವಿದೊಡ್ಡಿಯಲ್ಲಿ 1550 ಮೀಟರ್ ನಷ್ಟು ಯುಜಿಡಿ ಅವಶ್ಯಕತೆಯಿದೆ. ಸುಮಾರು 12.5 ಕೋಟಿ ರು. ಕ್ರಿಯಾಯೋಜನೆ ಕೆಲಸಗಳ ಹೆಸರು ಬದಲಾಗ ಬೇಕಿದೆ. ಕೆಲವು ಸಣ್ಣ ರಸ್ತೆಗಳನ್ನು ಕಡೆಗಣಿಸುವಂತಿಲ್ಲ. ಎಲ್ಲ ರಸ್ತೆಗಳನ್ನು ಕೈಗೆತ್ತಿಕೊಂಡು ಯುಜಿಡಿ ಮತ್ತು ರಸ್ತೆ ಅಭಿವೃದ್ಧಿ ಕೆಲಸ ನಡೆಯಬೇಕಿದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಪೌರಾಯುಕ್ತ ಡಾ.ಜಯಣ್ಣ, ಎಇಇ ವಿಶ್ವನಾಥ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕುಸುಮಾ, ಗುತ್ತಿಗೆದಾರರಾದ ರಮೇಶ್, ಆಂಜನಪ್ಪ ಮತ್ತಿತರರು ಉಪಸ್ಥಿತರಿದ್ದರು.1ಕೆಆರ್ ಎಂಎನ್ 5.ಜೆಪಿಜಿ
ರಾಮನಗರ ನಗರಸಭೆ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಯುಐಡಿಎಫ್ ನ 82 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಂಡಿರುವ ಮೂರು ಹಂತದ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.