ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ: ಈ ವರ್ಷ 1,090 ಪ್ರಕರಣ 1,372 ಮಂದಿ ಬಂಧನ

KannadaprabhaNewsNetwork |  
Published : Dec 29, 2024, 01:17 AM IST
11 | Kannada Prabha

ಸಾರಾಂಶ

ನಿರಂತರ ಮಾದಕ ದ್ರವ್ಯ ಪತ್ತೆ ಪ್ರಕರಣದಲ್ಲಿ ಭಾಗಿಯಾದ 3 ಮಂದಿ ಆರೋಪಿಗಳ ಮೇಲೆ ಗೂಂಡಾ ಕಾಯಿದೆ, 28 ಮಂದಿ ಗಡಿಪಾರು, 123 ಮಂದಿ ಬಾಂಡ್‌ ಜಾಮೀನು, 18 ಬಾಂಡ್‌ ಮುಟ್ಟುಗೋಲು ಹಾಕಲಾಗಿದೆ. ಒಟ್ಟು 212 ಮಾದಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾದಕ ಜಾಗೃತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಹಿರಿಯ ನಾಗರಿಕರು, 8 ಸಾವಿರಕ್ಕೂ ಅಧಿಕ ಮಂದಿ ವಾಕಥಾನ್‌ನಲ್ಲಿ ಭಾಗವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಳೆದ(2024) ಒಂದು ವರ್ಷದಲ್ಲಿ 1,090 ಪ್ರಕರಣಗಳನ್ನು ಪತ್ತೆಹಚ್ಚಿ, 1,372 ಮಂದಿಯನ್ನು ಬಂಧಿಸುವ ಮೂಲಕ ಮಂಗಳೂರು ಪೊಲೀಸರು ಉತ್ತಮ ಸಾಧನೆ ಮಾಡಿದ್ದಾರೆ.

2022ರಲ್ಲಿ ಒಟ್ಟು 397 ಪ್ರಕರಣ ದಾಖಲಾಗಿ, 509 ಮಂದಿಯನ್ನು ಬಂಧಿಸಲಾಗಿತ್ತು. 2023ರಲ್ಲಿ 713 ಪ್ರಕರಣ ದಾಖಲಾಗಿ, 948 ಮಂದಿಯನ್ನು ಬಂಧಿಸಲಾಗಿದೆ. 2024ರಲ್ಲಿ 1,090 ಪ್ರಕರಣ ದಾಖಲಾಗಿದ್ದು, 1,372 ಮಂದಿಯನ್ನು ಬಂಧಿಸಲಾಗಿದೆ.ಮಾದಕದ್ರವ್ಯ ಸೇವನೆ ಶೇ.62ರಷ್ಟು ಅಧಿಕ: ಈ ವರ್ಷ ಬಂಧಿತ ಆರೋಪಿಗಳಲ್ಲಿ 4 ಮಂದಿ ವಿದೇಶಿಯರೂ ಇದ್ದಾರೆ. 1,372 ಮಂದಿ ಬಂಧಿತರ ಪೈಕಿ 88 ಮಂದಿ ಮಾದಕ ವಸ್ತು ಮಾರಾಟಗಾರರಾಗಿದ್ದರೆ, 1,002 ಮಂದಿ ಮಾದಕ ಸೇವನೆ ಮಾಡುವವರು. ಮಾದಕ ಸೇವನೆ ಮಾಡುವವರ ಸಂಖ್ಯೆಯನ್ನು 2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ.62ರಷ್ಟುಅಧಿಕವಾಗಿದೆ. ಕಾವೂರು (100), ಉಳ್ಳಾಲ (104), ಬಂದರು (101) ಠಾಣೆಗಳಲ್ಲಿ 100ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.

ವಶಪಡಿಸಿಕೊಂಡ ಮಾದಕ ವಸ್ತುಗಳು: 2023ರಲ್ಲಿ 192.47 ಗಾಂಜಾ, 0.651 ಸಿಂಥೆಟಿಕ್‌ ಡ್ರಗ್ಸ್‌ನೊಂದಿಗೆ 59,60,000 ಲಕ್ಷ ರು. ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. 2023ರಲ್ಲಿ 275.42 ಕೆಜಿ ಗಾಂಜಾ, 2.42 ಕೆಜಿ ಸಿಂಥೆಟಿಕ್‌ ಡ್ರಗ್ಸ್‌ ಸೇರಿದಂತೆ 1,71,12,000 ಕೋಟಿ ರು. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. 2024ರಲ್ಲಿ 191.073 ಕೆಜಿ ಗಾಂಜಾ, 7.437 ಕೆಜಿ ಸಿಂಥೆಟಿಕ್‌ ಡ್ರಗ್ಸ್‌ ಜತೆ 7,51,73,000 ಕೋಟಿ ರು. ಮೌಲ್ಯದ ಮಾದಕ ವಶಪಡಿಸಿಕೊಳ್ಳಲಾಗಿದೆ. 2023ರಲ್ಲಿ ವಶಪಡಿಸಿಕೊಂಡ ಡ್ರಗ್ಸ್‌ ಹೋಲಿಕೆ ಮಾಡಿದಾಗ 2024ರಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ಶೇ. 314 ಮತ್ತು ಡ್ರಗ್ಸ್‌ ಮೌಲ್ಯ ಶೇ.339 ರಷ್ಟು ಅಧಿಕವಾಗಿದೆ. 191.073 ಗಾಂಜಾ, 100 ಗ್ರಾಂ ಚರಸ್‌, 20 ಎಂಎಲ್‌ ಗಾಂಜಾ ಆಷ್‌ ಆಯಿಲ್‌, ಹೈಡ್ರೊಯ್ಡ್‌ ಗಾಂಜಾ 8 ಗ್ರಾಂ, ಎಂಡಿಎಂಎ 7.305 ಗ್ರಾಂ ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳ ವಿರುದ್ಧ ಕಠಿಣ ಕ್ರಮ:

ನಿರಂತರ ಮಾದಕ ದ್ರವ್ಯ ಪತ್ತೆ ಪ್ರಕರಣದಲ್ಲಿ ಭಾಗಿಯಾದ 3 ಮಂದಿ ಆರೋಪಿಗಳ ಮೇಲೆ ಗೂಂಡಾ ಕಾಯಿದೆ, 28 ಮಂದಿ ಗಡಿಪಾರು, 123 ಮಂದಿ ಬಾಂಡ್‌ ಜಾಮೀನು, 18 ಬಾಂಡ್‌ ಮುಟ್ಟುಗೋಲು ಹಾಕಲಾಗಿದೆ. ಒಟ್ಟು 212 ಮಾದಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾದಕ ಜಾಗೃತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಹಿರಿಯ ನಾಗರಿಕರು, 8 ಸಾವಿರಕ್ಕೂ ಅಧಿಕ ಮಂದಿ ವಾಕಥಾನ್‌ನಲ್ಲಿ ಭಾಗವಹಿಸಿದ್ದಾರೆ. 5,000 ಸಾವಿರ ಅಧಿಕ ಮಂದಿ ನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮಾದಕ ಆರೋಪಿಗಳಿಗೆ ಶಿಕ್ಷೆ ಬಂದರು ಪೊಲೀಸ್‌ ಠಾಣಾ ವ್ಯಾಪ್ತಿಯ ಮೊಹಮ್ಮದ್‌ ಕಮಿಲ್‌ (32) ಪ್ರಕರಣ ಸಾಬೀತಾಗಿ 6 ತಿಂಗಳು ಶಿಕ್ಷೆ ಮತ್ತು 10 ಸಾವಿರ ರು. ದಂಡ, ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮೊಹಮ್ಮದ್‌ ರಮೀಜ್‌ (30)ಗೆ 6 ತಿಂಗಳು ಶಿಕ್ಷೆ ಮತ್ತು 10 ಸಾವಿರ ರು. ದಂಡ, ಕೋಣಾಜೆ ಠಾಣಾ ವ್ಯಾಪ್ತಿಯ ಅಬ್ದುಲ್‌ ರಹಮಾನ್‌, ಅಬ್ದುಲ್‌ ಖಾದರ್‌ಗೆ 6 ತಿಂಗಳ ಶಿಕ್ಷೆ 5 ಸಾವಿರ ರು. ದಂಡ ವಿಧಿಸಿದೆ. ಸುರತ್ಕಲ್‌ ಠಾಣಾ ವ್ಯಾಪ್ತಿಯ ವೈಶಾಕ್‌ಗೆ 6 ತಿಂಗಳ ಶಿಕ್ಷೆ 10 ಸಾವಿರ ರು. ದಂಡ, ಬರ್ಕೆ ಪೊಲೀಸ್‌ ಠಾಣೆಯ ದೀಕ್ಷಿತ್‌ ನಾಯಕ್‌, ಕಾರ್ತಿಕ್‌ 1 ವರ್ಷ ಶಿಕ್ಷೆ, 1 ಸಾವಿರ ರು. ದಂಡ ವಿಧಿಸಿದೆ.ಜೈಲಿಗೆ ದಾಳಿ, ವಶಕ್ಕೆ: ಪೊಲೀಸ್‌ ಕಮಿಷನರ್‌ ಸೇರಿದಂತೆ ಅಧಿಕಾರಿಗಳು ಜು.25ರಂದು ನಗರದ ಜೈಲ್‌ಗೆ ದಾಳಿ ನಡೆಸಿ 29 ಮೊಬೈಲ್‌ ಪತ್ತೆಯಾಗಿದೆ. ಜು.27ರಂದು ನಾನಾ ಕಡೆ ದಾಳಿ ನಡೆಸಿ 40 ಮಂದಿಯನ್ನು ತಪಾಸಣೆ ನಡೆಸಿದಾಗ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ನ್ಯಾಯಾಲಯದ ಆದೇಶದಂತೆ ಸುಮಾರು 13.59 ಲಕ್ಷ ರು. ಮೌಲ್ಯದ 53.658 ಕೆಜಿ ಗಾಂಜಾವನ್ನು ನಾಶಪಡಿಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!