ಬೆಳ್ತಂಗಡಿ: ಆಗಮಗಳ ಪ್ರಕಾರ ದೇವಸ್ಥಾನ ಶರೀರ ಎಂದು ಭಾವಿಸಿದರೆ, ದೇವರು ಆತ್ಮನ ಸ್ವರೂಪದಲ್ಲಿರುತ್ತಾನೆ. ದೇವರ ಸಾನ್ನಿಧ್ಯದಲ್ಲಿ ಅರ್ಚಕರು ಹಾಗೂ ತಂತ್ರಿಗಳು ಮಾಡುವ ವೇದ, ಪುರಾಣಗಳ ಪಾರಾಯಣ, ಮಂತ್ರಪಠಣ, ಅನ್ನದಾನ ಮೊದಲಾದ ಕಾರ್ಯಗಳಿಂದ ದೇವರ ಸಾನ್ನಿಧ್ಯ ವೃದ್ಧಿಯಾಗಿ ಭಕ್ತರ ಪ್ರಾರ್ಥನೆ, ಅಭೀಷ್ಟಗಳು ಈಡೇರುತ್ತವೆ ಎಂದು ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಹೇಳಿದರು.ಅವರು ಸೋಮವಾರ ಉಜಿರೆಯಲ್ಲಿ ಕೃಷ್ಣಾನುಗ್ರಹ ಸಭಾಭವನದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು.ನಾರಾಯಣ ತೇ ನಮೋ ನಮೋ ಎಂಬ ಭಕ್ತಿಗೀತೆಯನ್ನು ಸ್ವಾಮೀಜಿ ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳ ಪ್ರಶಂಸೆಗೆ ಪಾತ್ರರಾದರು. ಬ್ರಹ್ಮಕಲಶದೊಂದಿಗೆ ಜನತಾ ಜನಾರ್ದನ ಸೇವೆ ನಿತ್ಯ, ನಿರಂತ ನಡೆಯಲಿ ಎಂದು ಸ್ವಾಮೀಜಿ ಶುಭ ಹಾರೈಸಿದರು. ಸುರುಚಿ ಪಾಕಶಾಲೆ ಉದ್ಘಾಟಿಸಿದ ಬೆಂಗಳೂರು ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್, ಮಾತನಾಡಿ ಪಾಕಶಾಲೆಯ ಎಲ್ಲ ವಿಭಾಗಗಳನ್ನೂ ರಂಗೋಲಿ, ಫಲ-ಪುಷ್ಪ, ತರಕಾರಿ, ಎಲೆಗಳು, ಇತ್ಯಾದಿ ಪ್ರಾಕೃತಿಕ ಪರಿಕರಗಳನ್ನು ಬಳಸಿ ಆಕರ್ಷಕ ವಿನ್ಯಾಸದಿಂದ ಸಿಂಗರಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಅನ್ನದಾನಕ್ಕೆ ವಿಶೇಷ ಮಹತ್ವ ಇದೆ ಹಾಗೂ ಭಕ್ತರು ತೃಪ್ತರಾದರೆ, ಭಗವಂತನೂ ತೃಪ್ತರಾಗುತ್ತಾರೆ ಎಂಬ ನಂಬಿಕೆಯ ನೆಲೆಯಲ್ಲಿ ಧರ್ಮಸ್ಥಳವೂ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಅನ್ನದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಭಕ್ತರಲ್ಲೇ ನಾವು ದೇವರನ್ನು ಕಾಣಬಹುದು ಎಂದರು.
ವಿಜಯಗೋಪುರ ಲೋಕಾರ್ಪಣೆ ನಾಳೆಬುಧವಾರ ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವಿಜಯಗೋಪುರ ಲೋಕಾರ್ಪಣೆ ಮಾಡುವರು. ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀವರ್ಚನ ನೀಡುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಭಾಶಂಸನೆ ಮಾಡುವರು. ಸಂಜೆ ಆರು ಗಂಟೆಗೆ ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಮೂಡುಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಶೀರ್ವಚನ ನೀಡುವರು.