ಉಜಿರೆ: ವ್ಯವಸ್ಥಿತ ರಸ್ತೆ ವೃತ್ತ ರಚನೆ ಆಗ್ರಹ

KannadaprabhaNewsNetwork |  
Published : Jul 17, 2026, 02:45 AM IST
ವಾಹನ | Kannada Prabha

ಸಾರಾಂಶ

ತಾಲೂಕಿನ ಪ್ರಮುಖ ಪೇಟೆ ಉಜಿರೆಯಲ್ಲಿ ವ್ಯವಸ್ಥಿತವಾಗಿ ರಸ್ತೆ ವೃತ್ತವನ್ನು ರಚಿಸುವಂತೆ ವಾಹನ ಸವಾರರು, ಸ್ಥಳೀಯರು ಹಾಗೂ ಇಲ್ಲಿನ ಉದ್ಯಮಿಗಳು ಆಗ್ರಹ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ಪ್ರಮುಖ ಪೇಟೆ ಉಜಿರೆಯಲ್ಲಿ ವ್ಯವಸ್ಥಿತವಾಗಿ ರಸ್ತೆ ವೃತ್ತವನ್ನು ರಚಿಸುವಂತೆ ವಾಹನ ಸವಾರರು, ಸ್ಥಳೀಯರು ಹಾಗೂ ಇಲ್ಲಿನ ಉದ್ಯಮಿಗಳು ಆಗ್ರಹ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಇದ್ದ ಸರ್ಕಲ್ ನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ತೆರವುಗೊಳಿಸಲಾಗಿದೆ. ಬಳಿಕ ತಾತ್ಕಾಲಿಕವಾಗಿ ಬ್ಯಾರಿಕೇಡ್ ಗಳ ಸರ್ಕಲ್ ಹಾಕಲಾಗಿತ್ತು. ಇದೀಗ ಇಲ್ಲಿ ಪ್ರಾಯೋಗಿಕವಾಗಿ ಸರ್ಕಲ್ ಮಾಡಲಾಗಿದೆ. ಇಲ್ಲಿನ ವಾಹನ ಸಂಚಾರ ಪರಿಸ್ಥಿತಿ ಪರಿಗಣಿಸಿ ಅದಕ್ಕೆ ತಕ್ಕಂತೆ ಸರ್ಕಲ್ ನಿರ್ಮಾಣಗೊಳ್ಳಲಿದೆ. ಆದರೆ ಈಗಿರುವ ಪ್ರಾಯೋಗಿಕ ಸರ್ಕಲ್ ಅವೈಜ್ಞಾನಿಕವಾಗಿದ್ದು ಈ ರೀತಿ ಸರ್ಕಲ್ ನಿರ್ಮಾಣವಾದರೆ ಇಲ್ಲಿ ಇನ್ನಷ್ಟು ಟ್ರಾಫಿಕ್ ಜಾಮ್, ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಅಲ್ಲದೆ ಈಗಿರುವ ಪ್ರಾಯೋಗಿಕ ಸರ್ಕಲ್ ಪ್ರಕಾರ ಖಾಯಂ ಸರ್ಕಲ್ ನಿರ್ಮಾಣಗೊಂಡರೆ ವಾಹನ ಸಂಚಾರಕ್ಕೆ ಜಾಗದ ಕೊರತೆ ಎದುರಾಗಲಿದೆ.

ಚಾರ್ಮಾಡಿ, ಧರ್ಮಸ್ಥಳ, ಬೆಳ್ತಂಗಡಿ ಕಡೆಯಿಂದ ಹೋಗುವ ಮತ್ತು ಬರುವ ವಾಹನಗಳು ಸುಲಭವಾಗಿ ಸಂಚರಿಸಲು ಇಲ್ಲಿ ಅನೇಕ ವರ್ಷಗಳ ಹಿಂದಿನಿಂದ ವೃತ್ತಾಕಾರದ ಸರ್ಕಲ್ ಇತ್ತು. ಸುಮಾರು 15 ವರ್ಷಗಳ ಹಿಂದೆ ಈ ವೃತ್ತಾಕಾರದ ಸರ್ಕಲ್ ನ್ನು ತೆರವುಗೊಳಿಸಿ ಬೇರೆ ಬೇರೆ ಭಾಗಗಳಿಂದ ಆಗಮಿಸುವ ವಾಹನಗಳಿಗೆ ಸರ್ಕಲ್ ಪ್ರದೇಶದಲ್ಲಿ ಪ್ರತ್ಯೇಕ ರಸ್ತೆ ನಿರ್ಮಿಸಲಾಯಿತು. ಆದರೆ ಇದು ತೀರಾ ಅವೈಜ್ಞಾನಿಕವಾಗಿ ನಿರ್ಮಾಣವಾದ ಕಾರಣ ವಾಹನ ಸವಾರರು ಪರದಾಡುವ ಜತೆ ಸಾಕಷ್ಟು ಅಪಘಾತಗಳು ಸಂಭವಿಸಿದವು. ಬಳಿಕ ಕಳೆದ ಹತ್ತು ವರ್ಷಗಳ ಹಿಂದೆ ಆ ರಸ್ತೆಗಳನ್ನು ತೆರೆವುಗೊಳಿಸಿ ಅದೇ ಸ್ಥಳದಲ್ಲಿ ಮತ್ತೆ ಸರ್ಕಲ್ ನಿರ್ಮಿಸಲಾಯಿತು. ಆ ಸರ್ಕಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ತೆರೆವುಗೊಂಡಿದೆ.

ಹಲವು ಬಸ್ ಗಳು ಸರ್ಕಲ್ ಇರುವ ಪ್ರದೇಶದಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ಹಲವು ವಾಹನ ಸವಾರರು ಸರ್ಕಲ್ ನಿಯಮ ಪಾಲಿಸದೆ ಬೇಕಾಬಿಟ್ಟಿ ಸಂಚಾರ ನಡೆಸುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಉಜಿರೆಯಲ್ಲಿ ಪ್ರಾಯೋಗಿಕವಾಗಿ ಸರ್ಕಲ್ ನಿರ್ಮಾಣ ಮಾಡಲಾಗಿದ್ದು, ಇಲ್ಲಿನ ವಾಹನ ಸಂಚಾರ ವ್ಯವಸ್ಥೆಯನ್ನು ಪ್ರತಿನಿತ್ಯ ಪರಿಶೀಲಿಸಲಾಗುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆ ಅಪಘಾತಗಳು ಉಂಟಾಗದಂತೆ ವ್ಯವಸ್ಥಿತ ಸರ್ಕಲ್ ನಿರ್ಮಾಣದ ಕುರಿತು ಯೋಜನೆ ರೂಪಿಸಲಾಗುತ್ತಿದೆ.

-ಗುರುಪ್ರಸಾದ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ.

ಈ ಹಿಂದೆ ನಿರ್ಮಾಣವಾದ ಸರ್ಕಲ್ ಗಳು ತೀರಾ ಅವೈಜ್ಞಾನಿಕವಾಗಿದ್ದ ಕಾರಣ ಅಪಘಾತಗಳ ಸಹಿತ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇದರ ಜತೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕಿದೆ.

ಜಯಂತ, ಉದ್ಯಮಿ, ಉಜಿರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಮಿಕಲ್‌ ಮಿಶ್ರಿತ ಹಾಲು ಪೂರೈಕೆ ತಡೆಯಲು ಆಗ್ರಹಿಸಿ ಡಿಸಿಗೆ ಮನವಿ
ಹಾವುಗಳ ಬಗೆಗಿನ ಮೂಢನಂಬಿಕೆ ಬಿಟ್ಟು ರಕ್ಷಣೆ ಮಾಡಿ: ಎಸ್ಪಿ ಲಕ್ಷ್ಮಣ ನಿಂಬರಗಿ