ಉಜ್ಜಯಿನಿ ಕಾಣಿಕೆ, ಹರಕೆ ಹಣ ಸರ್ಕಾರದ ಬೊಕ್ಕಸ ಸೇರಲಿ

KannadaprabhaNewsNetwork |  
Published : Apr 26, 2026, 03:00 AM IST
19ಕೆಡಿವಿಜಿ8-ದಾವಣಗೆರೆಯಲ್ಲಿ ಶನಿವಾರ ವಿಜಯ ನಗರ ಜಿಲ್ಲೆ ಕೊಟ್ಟೂರು ತಾ. ಉಜ್ಜಯಿನಿ ಸುಕ್ಷೇತ್ರದ ರಾಜೇಂದ್ರ ಪ್ರಸಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಿಜಯ ನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಪವಾಡ ಕ್ಷೇತ್ರ ಉಜ್ಜಯಿನಿ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನವು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಎ ಶ್ರೇಣಿಯ ದೇವಸ್ಥಾನವಾಗಿದೆ. ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಕಾಣಿಕೆ ಹಾಗೂ ಹರಕೆ ಹಣವು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರದೇ, ಉಜ್ಜಯಿನಿ ಪೀಠದ ಸ್ವಾಮೀಜಿ ಪಾಲಾಗುತ್ತಿದೆ ಎಂದು ರಾಜೇಂದ್ರ ಪ್ರಸಾದ ಆರೋಪಿಸಿದ್ದಾರೆ.

- ಪವಾಡ ಕ್ಷೇತ್ರದ ಹಿತ ಕಾಯಲು, ಭಕ್ತರಿಗೆ ಮೂಲಸೌಕರ್ಯಕ್ಕೆ ರಾಜೇಂದ್ರ ಪ್ರಸಾದ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಜಯ ನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಪವಾಡ ಕ್ಷೇತ್ರ ಉಜ್ಜಯಿನಿ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನವು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಎ ಶ್ರೇಣಿಯ ದೇವಸ್ಥಾನವಾಗಿದೆ. ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಕಾಣಿಕೆ ಹಾಗೂ ಹರಕೆ ಹಣವು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರದೇ, ಉಜ್ಜಯಿನಿ ಪೀಠದ ಸ್ವಾಮೀಜಿ ಪಾಲಾಗುತ್ತಿದೆ ಎಂದು ರಾಜೇಂದ್ರ ಪ್ರಸಾದ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಇತ್ತೀಚೆಗೆ ಮಾತನಾಡಿದ ಅವರು, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎ ಶ್ರೇಣಿಯ ಉಜ್ಜಯಿನಿ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ಸಕ್ರಿಯವಾಗಿ ಮೊದಲು ಮಧ್ಯ ಪ್ರವೇಶಿಸಿ, ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಕಾಣಿಕೆ ಹಾಗೂ ಹರಕೆ ಹಣ ಸರ್ಕಾರದ ಬೊಕ್ಕಸಕ್ಕೆ ಸೇರುವಂತೆ ಮೊದಲು ಕ್ರಮ ಕೈಗೊಳ್ಳಬೇಕು ಎಂದರು.

ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಚಿನ್ನಾಭರಣ, ಬೆಳ್ಳಿ ಆಭರಣ, ವಸ್ತುಗಳು, ನಗದು ಕಾಣಿಕೆ ಅರ್ಪಿಸಿದಾಗ ಇಲಾಖೆಯ ಅಧಿಕೃತ ರಸೀದಿ ನೀಡುವ ಬದಲಿಗೆ, ಮಠದ ಹೆಸರಿನಲ್ಲಿ ಬೋಗಸ್ ರಸೀದಿಗಳನ್ನು ನೀಡಲಾಗುತ್ತಿದೆ. ಹೀಗೆ ಬಂದ ಹಣವು, ಆಭರಣಗಳು ಸರ್ಕಾರದ ಖಾತೆಗೆ ಜಮಾ ಆಗುತ್ತಿಲ್ಲ. ಬದಲಾಗಿ ಸ್ವಾಮೀಜಿಯೊಬ್ಬರ ಆಪ್ತ ವ್ಯಕ್ತಿಯೊಬ್ಬರ ಕೈ ಸೇರುತ್ತಿದೆ. ಇದನ್ನು ಮೊದಲು ತಡೆಯಬೇಕು ಎಂದು ಅವರು ಹೇಳಿದರು.

ಮೂಲಸೌಕರ್ಯ ಕೊರತೆ, ಹಣ ದುರುಪಯೋಗದ ದೂರುಗಳು ದೇವಸ್ಥಾನದ ಬಗ್ಗೆ ಕೇಳಿ ಬರುತ್ತಿವೆ. ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಮಂಜೂರಾದ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಜರಾಯಿ ಇಲಾಖೆಯಿಂದ 2022ರಲ್ಲಿ ಗೋ ಶಾಲೆ, ಭೋಜನ ಶಾಲೆ ನಿರ್ಮಿಸಲು ₹1 ಕೋಟಿ ಅನುದಾನ ಮಂಜೂರಾಗಿದ್ದರೂ ಅನುದಾನವನ್ನು ಸ್ವಾಮೀಜಿ ತಮ್ಮ ವೈಯಕ್ತಿಕ ಖಾತೆಗೆ ಜಮಾ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಈ ಕಾರಣಕ್ಕೆ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಭಕ್ತರಿಗೆ ಅಲ್ಲಿ ಕನಿಷ್ಠ ಮೂಲಸೌಕರ್ಯಗಳಾದ ಶೌಚಾಲಯ, ವಿಶ್ರಾಂತಿ ಕೊಠಡಿ ಸಹ ಇಲ್ಲದಾಗಿದೆ ಎಂದು ದೂರಿದರು.

ನಿಯಮಾನುಸಾರ ದೇವಸ್ಥಾನದ ಹುಂಡಿಯನ್ನು ತಹಸೀಲ್ದಾರ್‌ ಹಾಗೂ ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ತೆರೆದು, ಹುಂಡಿ ಕಾಣಿಕೆ ಎಣಿಸುವ ಕಾರ್ಯ ನಡೆಸಬೇಕಾಗಿತ್ತು. ಆದರೆ, ಅದನ್ನು ಸಹ ಉಲ್ಲಂಘನೆ ಮಾಡಲಾಗಿದೆ. 26.9.2023ರಂದು ಈ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ. ರಥೋತ್ಸವದ ವೇಳೆ ರಥದ ಮೇಲೆ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳನ್ನು ಕೂಡಿಸಿ, ಭಾಷಣ ಮಾಡಿಸುವ ಮೂಲಕ ರಥೋತ್ಸವ ವಿಳಂಬವಾಗುವಂತೆ ಮಾಡಲಾಗುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ಪವಿತ್ರ ತೈಲಾಭಿಷೇಕದ ವೇಳೆಯೂ ಧಾರ್ಮಿಕ ಆಚರಣೆಗಳನ್ನು ಅಪವಿತ್ರ ಗೊಳಿಸಲಾಗುತ್ತಿದೆ ಎಂದು ರಾಜೇಂದ್ರ ಪ್ರಸಾದ ಆರೋಪಿಸಿದ್ದಾರೆ.

ಆರ್.ಯೋಗೇಶಪ್ಪ, ಉಜ್ಜಿನಿ ಬಸವರಾಜ, ಕೆ.ಮಂಜುನಾಥ ಇತರರು ಇದ್ದರು.

- - -

-19ಕೆಡಿವಿಜಿ8: ದಾವಣಗೆರೆಯಲ್ಲಿ ಶನಿವಾರ ವಿಜಯ ನಗರ ಜಿಲ್ಲೆ ಕೊಟ್ಟೂರು ತಾ. ಉಜ್ಜಯಿನಿ ಸುಕ್ಷೇತ್ರದ ರಾಜೇಂದ್ರ ಪ್ರಸಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿ ಮಸೂದೆ ತಡೆದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ
ಒಳ ಮೀಸಲಾತಿ ಹಂಚಿಕೆ ಅವೈಜ್ಞಾನಿಕ-ಮಾಜಿ ಸಚಿವ ಬಿ.ಸಿ. ಪಾಟೀಲ್ ಆರೋಪ