ಉಳ್ಳಾಲ: ಸ್ತಬ್ಧಚಿತ್ರಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕ ತಡರಾತ್ರಿ ಬಳಸದಂತೆ ನಿಲ್ಲಿಸಿದ ಉಳ್ಳಾಲ ಪೊಲೀಸರ ಹಾಗೂ ಸ್ತಬ್ದಚಿತ್ರ ಬಳಿಯಿದ್ದ ಯುವಕರ ನಡುವೆ ನಡೆದ ವಾಗ್ವಾದದಿಂದ ಮೂವರನ್ನು ವಶಕ್ಕೆ ಪಡೆದ ಘಟನೆಯಿಂದ ಠಾಣೆಯೆದುರೇ ಇಡೀ ಭಕ್ತಸಮೂಹ ಎರಡೂವರೆ ಗಂಟೆಗಳ ಕಾಲ ತಡರಾತ್ರಿಯೇ ಕುಳಿತು ಪ್ರತಿಭಟಿಸಿದ ಘಟನೆ ಉಳ್ಳಾಲ ಪೊಲೀಸ್ ಠಾಣೆಯೆದುರು ಶುಕ್ರವಾರ ನಸುಕಿನ ಜಾವ ಸಂಭವಿಸಿದೆ. ವಶದಲ್ಲಿದ್ದ ಇಬ್ಬರನ್ನು ಬಿಡುಗಡೆಗೊಳಿಸಿದ ನಂತರ ಶೋಭಾಯಾತ್ರೆ ಮುಂದುವರಿದು ಬೆಳಗ್ಗಿನ ವೇಳೆ ಶಾರದಾ ಮೂರ್ತಿಯ ವಿಸರ್ಜನೆ ನಡೆದಿದೆ.ಘಟನೆ ಹಿನ್ನೆಲೆ:
ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲದ ಶಾರದಾನಿಕೇತನದಲ್ಲಿ ೭೮ನೇ ವರ್ಷದ ಶಾರದೋತ್ಸವ ಆಯೋಜಿಸಿತ್ತು. ಸಂಜೆ ಆರಂಭಗೊಂಡ ಶಾರದಾ ವಿಸರ್ಜನೆ ಮೆರವಣಿಗೆ ವಿದ್ಯಾರಣ್ಯ ನಗರ, ಚೀರುಂಭ ಭಗವತೀ ಕ್ಷೇತ್ರದ ಒಳರಸ್ತೆಯಾಗಿ ರಾತ್ರಿ ೧ ರ ಸುಮಾರಿಗೆ ಉಳ್ಳಾಲದ ಅಬ್ಬಕ್ಕ ವೃತ್ತ ತಲುಪಿತ್ತು. ಈ ಸಂದರ್ಭದಲ್ಲಿ ಧ್ವನಿವರ್ಧಕ ನಿಲ್ಲಿಸುವಂತೆ ಉಳ್ಳಾಲ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೂಚಿಸಿದಂತೆ ಕೆಲ ಮಂದಿ ನಿಲ್ಲಿಸಿ ಮುಂದುವರಿದಿದ್ದರು. ಕೆಲ ಹೊತ್ತಿನಲ್ಲಿ ಯುವಕರ ತಂಡ ಪೊಲೀಸರ ನಡುವೆ ವಾಗ್ವಾದಕ್ಕಿಳಿದು ೭೮ ವರ್ಷಗಳಿಂದ ಆರಾಧಿಸುತ್ತಾ ಬಂದಿರುವ ಉತ್ಸವದಲ್ಲಿ ಹಿಂದೆಂದೂ ಪೊಲೀಸರ ಮಧ್ಯಪ್ರವೇಶ ಆಗಿಲ್ಲ. ಯಾರಿಗೂ ತೊಂದರೆಯಾಗದಂತೆ ಶಾರದಾ ಮೆರವಣಿಗೆ ನಡೆದಿದೆ ಎಂಬ ವಾದ ಕೇಳಿ ಬಂತು.ಈ ವೇಳೆ ಪೊಲೀಸ್ ಹಾಗೂ ಭಕ್ತಸಮೂಹದ ನಡುವೆ ಮಾತಿಗೆ ಮಾತು ಬೆಳೆದು ರಕ್ಷಿತ್, ಆಶಿಶ್ ಮತ್ತು ಅಶ್ವತ್ಥ್ ಎಂಬ ಮೂವರು ಯುವಕರನ್ನು ಕೆಲ ಪರಿಕರಗಳೊಂದಿಗೆ ಪೊಲೀಸರು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿರಿಸಿದ್ದರು. ಇದರಿಂದ ಆಕ್ರೋಶಗೊಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಸೇರಿದಂತೆ ೧೦೦ ಕ್ಕೂ ಅಧಿಕ ಮಂದಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಶಾರದಾ ವಿಗ್ರಹವನ್ನು ರಸ್ತೆಯಲ್ಲಿಯೇ ನಿಲ್ಲಿಸಿ ವಶಕ್ಕೆ ಪಡೆದುಕೊಂಡ ಮೂವರು ಯುವಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದ ಉಳ್ಳಾಲದ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸಿಪಿ ವಿಜಯಕ್ರಾಂತಿ, ಡಿಸಿಪಿ ಮಿಥುನ್ ಹೆಚ್.ಎನ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಸಫಲವಾಗಲಿಲ್ಲ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡ ಸಂತೋಷ್ ರೈ ಬೋಳಿಯಾರ್, ಮೊಗವೀರ ಮುಖಂಡ ಯಶವಂತ್ ಅಮೀನ್ ಠಾಣೆಗೆ ಭೇಟಿ ನೀಡಿ ಬಂಧಿತರ ಬಿಡುಗಡೆಗೆ ಒತ್ತಾಯಿಸಿದರು. ಅದಕ್ಕೂ ಪೊಲೀಸರು ಒಪ್ಪದೇ ಇದ್ದಾಗ ನಾಯಕರು ಮುಂದಿನ ಪರಿಣಾಮಗಳನ್ನು ನೀವೇ ಎದುರಿಸಿರಿ ಎಂದು ಹೊರನಡೆದಿದ್ದಾರೆ.ಆದರೆ ಪಟ್ಟುಬಿಡದ ಭಕ್ತಸಮೂಹ ಪ್ರತಿಭಟನೆ ಮುಂದುವರಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ೪.೩೦ ರ ಸುಮಾರಿಗೆ ವಶದಲ್ಲಿರುವ ಆಶೀಶ್ ಮತ್ತು ಅಶ್ವತ್ ಇಬ್ಬರನ್ನು ಬಿಡುಗಡೆಗೊಳಿಸಿದರು. ರಕ್ಷಿತ್ ವಿರುದ್ಧ ಈಗಾಗಲೇ ಪ್ರಕರಣಗಳಿದ್ದು, ಇದೀಗ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿರುವುದರಿಂದ ಬಂಧಿಸಲಾಗಿದೆ. ದಸರಾ ಶೋಭಾಯಾತ್ರೆಯಲ್ಲಿ ಉಳ್ಳಾಲ ಪೊಲೀಸರು ಠಾಣೆಯ ಮುಂಭಾಗದಲ್ಲಿ ಶಾರದಾ ಮಾತೆಗೆ ಹೂ ಹಣ್ಣು ಸಮರ್ಪಿಸಿ ಮಂಗಳಾರತಿ ಸಲ್ಲಿಸುವುದು ವಾಡಿಕೆಯಾಗಿದೆ. ಈ ಬಾರಿ ಪೊಲೀಸರು ಟ್ಯಾಬ್ಲೋ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಅಸಮಧಾನಗೊಂಡಿದ್ದ ಶಾರದೆಯ ಪಲ್ಲಕ್ಕಿ ಹೊತ್ತಿದ್ದ ಭಜಕರ ತಂಡವು ಪೊಲೀಸ್ ಠಾಣೆಯ ಮುಂದೆ ಮಂಗಳಾರತಿಗೆ ಅವಕಾಶ ನೀಡದೆ ಮುಂದಕ್ಕೆ ತೆರಳಿದ್ದಾರೆ.