ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಉಚ್ಚಾಟನೆಗೊಂಡ ಸದಸ್ಯ ಸುಜಿತ್ ಮಾಡೂರು ಪರವಾಗಿ ಆಡಳಿತ ಪಕ್ಷದ ಆರು ಮಂದಿ ಸದಸ್ಯರು ಶುಕ್ರವಾರ ನಡೆದ ಸಾಮಾನ್ಯ ಸಭೆಗೆ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬೆಳವಣಿಗೆ ಪಟ್ಟಣ ಪಂಚಾಯತಿ ಆಡಳಿತದಲ್ಲಿ ರಾಜಕೀಯ ಅಸ್ಥಿರತೆಗೆ ದಾರಿ ಮಾಡಿಕೊಡುವ ಸೂಚನೆ ಎದ್ದು ಕಾಣುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿ ಹಾಗೂ ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಎಸ್ಡಿಪಿಐ ಸದಸ್ಯೆಯೊಂದಿಗೆ ಸೇರಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂಬ ಕಾರಣ ನೀಡಿ ಸುಜಿತ್ ಮಾಡೂರು ಅವರನ್ನು ಫೆ.19 ರಂದು ಜಿಲ್ಲಾ ಬಿಜೆಪಿ ಸಮಿತಿ ಉಚ್ಚಾಟಿಸಿತ್ತು. ಆದರೆ, ತಾನು ಬಡ ನಿವೇಶನ ರಹಿತರ ಪರವಾಗಿ ಅಧಿಕಾರಿಗಳ ವಿರುದ್ಧವೇ ಧ್ವನಿ ಎತ್ತಿದ್ದೇನೆ ಹೊರತು ಬಿಜೆಪಿ ವಿರುದ್ಧ ಅಲ್ಲ ಎಂದು ಸುಜಿತ್ ಮಾಧ್ಯಮಗಳಲ್ಲಿ ಸ್ಪಷ್ಟಪಡಿಸಿದ್ದರು.
ಸಭೆಯಲ್ಲಿ ಮಾತನಾಡಿದ ಪಕ್ಷೇತರ ಕೌನ್ಸಿಲರ್ ಹರೀಶ್ ರಾವ್, ಸುಜಿತ್ ಮಾಡೂರು ಅವರು ಬಡ ನಿವೇಶನ ರಹಿತರ ಪರವಾಗಿ ಧ್ವನಿ ಎತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಎಂದು ಹೇಳಿದರು. ಕಳೆದ ಒಂದೂವರೆ ವರ್ಷಗಳಿಂದ ಪ್ರತೀ ಸಭೆಯಲ್ಲೂ ನಿವೇಶನ ವಿಚಾರ ಪ್ರಸ್ತಾಪವಾಗುತ್ತಿದ್ದರೂ ಆಡಳಿತದಿಂದ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಕನಿಷ್ಠ ಆರು ಮಂದಿ ಸದಸ್ಯರ ಹಾಜರಾತಿ ಇಲ್ಲದೆ ಸಭೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಅಧ್ಯಕ್ಷರು ವಿಶ್ವಾಸ ಮತಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದಿವ್ಯ ಶೆಟ್ಟಿ, ಸುಜಿತ್ ಮಾಡೂರು ಉಚ್ಚಾಟನೆ ಪಕ್ಷಕ್ಕೆ ಸಂಬಂಧಿಸಿದ ವಿಚಾರ ಅದರ ಬಗ್ಗೆ ಇಲ್ಲಿ ಚರ್ಚೆ ಬೇಡ.ಪಟ್ಟಣ ವ್ಯಾಪ್ತಿಯ ಕಾಯರ್ ಮಜಲ್ ಎಂಬಲ್ಲಿನ ಜಮೀನನ್ನು ನಿವೇಶನ ರಹಿತರು ಮತ್ತು ತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಲಾಗಿತ್ತು. ಮನೆ ನಿವೇಶನ ಮತ್ತು ತ್ಯಾಜ್ಯ ವಿಲೇವಾರಿ ಘಟಕವನ್ನು ಒಂದೇ ಸರ್ವೇ ಸಂಖ್ಯೆಯಡಿ ಕಾಯ್ದಿರಿಸಿದ ಕಾರಣ ಸ್ಥಳೀಯರು ತ್ಯಾಜ್ಯ ಘಟಕ ನಿರ್ಮಾಣ ವಿರುದ್ಧ ಹೈಕೋರ್ಟ್ ನಲ್ಲಿ ಆಕ್ಷೇಪಣೆ ಸಲ್ಲಿಸಿ ತಡೆಯಾಜ್ನೆ ತಂದಿದ್ದರು.ಹೈ ಕೋರ್ಟ್ ತಡೆಯಾಜ್ನೆ ತೆರವುಗೊಳಿಸಲು ನಾವು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಬದಲಿ ಜಾಗ ನೀಡಬೇಕಿದೆ.ಹೀಗಾಗಿ ಅರ್ಜಿದಾರರಿಗೆ ನಿವೇಶನ ಹಂಚಲು ತೊಡಕುಂಟಾಗಿದೆ ಎಂದರು.