ಮುಂಗಾರು ಪೂರ್ವದ ಮಳೆಯ ಅಬ್ಬರದಲ್ಲಿ ಜೋರಾಗಿದ್ದ ಛತ್ರಿ, ರೇನ್‌ಕೋಟ್ ಖರೀದಿ ಜೋರು ಇದೆ.
ಗೋಕರ್ಣ: ಮುಂಗಾರು ಪೂರ್ವದ ಮಳೆಯ ಅಬ್ಬರದಲ್ಲಿ ಜೋರಾಗಿದ್ದ ಛತ್ರಿ, ರೇನ್‌ಕೋಟ್ ಖರೀದಿ ಜೋರು ಇದೆ. ಶಾಲಾ ಮಕ್ಕಳು ಮತ್ತಿತರರು ಮಳೆಗಾಲಕ್ಕೆ ಅಗತ್ಯ ಪರಿಕರ ಖರೀದಿಸುತ್ತಿದ್ದಾರೆ.
ಇಲ್ಲಿನ ವಿವಿಧ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೊಪ್ಪೆ ಮಾದರಿಯ ಅಂಗಿ ತೂಗು ಹಾಕಿದ್ದು, ಇದರ ಮಾರಾಟವೇ ಜೋರಾಗಿದೆ. ಇದರ ಜೊತೆ ಮಕ್ಕಳಿಗಾಗಿ ಬಣ್ಣ, ಬಣ್ಣದ ಆಕರ್ಷಕ ಛತ್ರಿ, ದೊಡ್ಡವರಿಗಾಗಿಯೇ ಬೃಹತ್ ಗಾತ್ರದ ಛತ್ರಯಿಂದ ಹಿಡಿದು ಬ್ಯಾಗ್‌ನಲ್ಲಿ ತುಂಬಿಡುವ ಚಿಕ್ಕ ಛತ್ರಿಯೂ ಲಭ್ಯ ವಿದೆ. ಪ್ರಸ್ತುತ ₹೧೫೦ರಿಂದ ₹೫೦೦ವರೆಗೆ ದರ ನಿಗದಿಯಾಗಿದೆ.
ರೇನ್‌ಕೋಟ್‌ಗೆ ಕೋಕ್, ಪ್ಲಾಸ್ಟಿಕ್ ಅಂಗಿಗೆ ಲೈಕ್:
ವಿವಿಧ ಕಂಪನಿಯ ರೇನ್‌ಕೋಟ್‌ಗಳಿಗೆ ಈ ಹಿಂದೆ ಬಹು ಬೇಡಿಕೆಯಿತ್ತು. ಕಳೆದ ಎರಡು ವರ್ಷಗಳಿಂದ ಪ್ಲಾಸ್ಟಿಕ್ ಕೊಪ್ಪೆಯನ್ನು ನಿಲುವಂಗಿ ಮಾದರಿಯಲ್ಲಿ ತಯಾರಿಸಿದ್ದು, ಕೇವಲ ₹೧೦೦ಕ್ಕೆ ಸಿಗುವ ಈ ಅಂಗಿಯನ್ನು ಎಲ್ಲರು ಖರೀದಿಸುತ್ತಿದ್ದಾರೆ. ರೇನ್ ಕೋಟ್ ಮಾರಾಟವೇ ಹಲವೆಡೆ ನಿಂತಿದೆ. ಇನ್ನು ಅಕಾಲಿಕ ಮಳೆ ಸುರಿದ ಸಮಯದಲ್ಲಿ ಪ್ರವಾಸಿಗರೇ ಅತಿ ಹೆಚ್ಚು ನೂರು ರುಪಾಯಿಯ ಪ್ಲಾಸ್ಟಿಕ್ ಅಂಗಿ ಖರೀದಿಸುತ್ತಿದ್ದಾರೆ. ಎಲ್ಲ ಅಂಗಡಿಯಲ್ಲೂ ಲಭ್ಯವಿದ್ದು, ಮಾರಾಟವೂ ಭರ್ಜರಿಯಾಗಿದೆ.
ಕೊಡೆ ರಿಪೇರಿಯವರೇ ಇಲ್ಲ:
ಈ ಭಾಗದಲ್ಲಿ ಮೊದಲು ಮಳೆಗಾಲ ಸಮೀಪಿಸುತ್ತಿದ್ದರೆ ಮನೆಬಾಗಿಲಿಗೆ ಕೊಡೆ ರಿಪೇರಿಯಿದೆಯೇ ಎಂದು ಕೇಳುತ್ತಾ ಬರುತ್ತಿದ್ದರು. ಅಲ್ಲದೇ ರಸ್ತೆ ಅಂಚಿನ ಕುಳಿತು ಛತ್ರಿ ರಿಪೇರಿ ಮಾಡುತ್ತಿದ್ದರು. ಆದರೆ ಪ್ರಸ್ತುತ ಎಲ್ಲಿಯೂ ಛತ್ರಿ ದುರಸ್ತಿಯವರು ಇಲ್ಲ. ಇದರಿಂದ ಸ್ವಲ್ಪ ಹಾಳಾದರೂ ಹೊಸ ಛತ್ರಿ ಖರೀದಿಸುವುದರಿಂದ ಬೇಡಿಕೆ ಹೆಚ್ಚುತ್ತಿದೆ ಎನ್ನಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.