ಸಿದ್ದಲಿಂಗ ಕಿಣಗಿ
ರಾಜ್ಯ ಶಿಕ್ಷಣ ಇಲಾಖೆ ಈ ಬಾರಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿಯೇ ಏಕಾಏಕಿ ಮಕ್ಕಳ ಭಾವನೆಯನ್ನು ಕೆರಳಿಸುವ ಆದೇಶ ಹೊರಡಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100 ಅಂಕದ ಹಿಂದಿ ವಿಷಯವನ್ನು 625 ಅಂಕದ ಪಟ್ಟಿಯಿಂದ ಹೊರಗಿಟ್ಟು ಕೇವಲ 525ಕ್ಕೆ ಸೀಮಿತಗೊಳಿಸಿ ಹಿಂದಿ ವಿಷಯಕ್ಕೆ ಗ್ರೇಡ್ ನೀಡುವ ಪದ್ಧತಿಯನ್ನು ಕೈಗೊಂಡಿರುವುದು ಪಾಲಕರು, ಶಿಕ್ಷಕರು ಮತ್ತು ಮುಖ್ಯವಾಗಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ.
ಈ ಕುರಿತು ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ಪತ್ರ ಚಳವಳಿ ಕೈಗೊಂಡಿದ್ದಾರೆ. ಶಿಕ್ಷಣ ಎನ್ನುವುದು ಮಕ್ಕಳಿಗೆ ಪೂರಕವಾಗಿರಬೇಕೆ ಹೊರತು ಬೇರೆ ಯಾವುದಕ್ಕೆ ಸೀಮಿತವಾಗಿರಬಾರದು. ಮಾ.31 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿಂದಿ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ನಾವು ವರ್ಷ ಪೂರ್ತಿ ಹಿಂದಿ ಕಲಿತಿದ್ದೇವೆ. ಎಲ್ಲ ತರಗತಿ, ತರಬೇತಿ, ಟೇಸ್ಟ್, ಸೆಮಿನಾರ್, ನಿಯೋಜನಾ ಕಾರ್ಯ ಸೇರಿದಂತೆ ಅನೇಕ ಸರಣಿ ಪರೀಕ್ಷೆ ಬರೆದಿದ್ದೇವೆ. ಏಕಾಏಕಿ ಸರ್ಕಾರ ಈ ಬಾರಿ ಹಿಂದಿಗೆ ಅಂಕವಿಲ್ಲ ಪಾಸಾದರೇನು? ಫೇಲಾದರೇನು? ಗ್ರೇಡ್ ನೀಡುತ್ತೇವೆ ಎನ್ನುವುದು ಯಾವ ನ್ಯಾಯ ಎಂದು ವಿದ್ಯಾರ್ಥಿಗಳು ಕನ್ನಡಪ್ರಭದೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಸರ್ಕಾರ ಈ ಕ್ರಮವನ್ನು ಕೈ ಬಿಡಬೇಕು ನಮಗೆ 625 ಅಂಕಕ್ಕೆ 625ರ ಪಟ್ಟಿ ನೀಡಬೇಕು, ಹೊರತು 525 ಅಂಕದ ಪಟ್ಟಿ ನಮಗೆ ಬೇಡ ಎಂದಿದ್ದಾರೆ.ಮಕ್ಕಳು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ನೋವು, ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಸೂಕ್ತಕ್ರಮ ಜರುಗಿಸಬೇಕು. ಮಕ್ಕಳ ಮನಸಿಗೆ ಘಾಸಿಯಾಗದಂತೆ ಅವರ ಭವಿಷ್ಯಕ್ಕೆ ಹೊಸ ಭಾಷೆ ನೀಡಬೇಕು ಎನ್ನುವುದು ಶೈಕ್ಷಣಿಕ ಪ್ರೇಮಿಗಳ ಕಾಳಜಿ. ಇಂದು ನಡೆಯಲಿರುವ ಪರೀಕ್ಷೆಗೆ ಯಾವ ಮಕ್ಕಳು ಗೈರಾಗಬಾರದು. ಕಡ್ಡಾಯವಾಗಿ ಎಲ್ಲ ಮಕ್ಕಳು ಪರೀಕ್ಷೆ ಬರಿಯಲೇ ಬೇಕೆಂದು ತಮಗೆ ಶುಭವಾಗಲಿ ಎನ್ನುವುದು ಕನ್ನಡಪ್ರಭ ಕಾಳಜಿ.2025-26ನೇ ಸಾಲಿಗೆ ನಾವು ಎಸ್ಸೆಸ್ಸೆಲ್ಸಿ ಓದುತ್ತಿದ್ದೇವೆ. ಒಟ್ಟು 6 ವಿಷಯಗಳು. ಎಲ್ಲ ವಿಷಯಗಳನ್ನು ಶ್ರದ್ಧೆಯಿಂದ ಕಲಿತಿದ್ದೇವೆ. ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿವೆ. ನಾವು ಇಲ್ಲಿಯವರೆಗೆ ಬರೆದ ವಿಷಯಗಳ ಪರೀಕ್ಷೆಗಳು ಚೆನ್ನಾಗಿ ಆಗಿವೆ. ಆದರೆ, ಸರ್ಕಾರ ಹಿಂದಿ ವಿಷಯದ ಬಗ್ಗೆ ಹೊರಡಿಸಿರುವ ಆದೇಶ ನಮಗೆ ಆತಂಕ ಮೂಡಿಸಿದೆ. ಸರ್ಕಾರ ನಮ್ಮ ಭವಿಷ್ಯದ ಕಡೆ ಗಮನ ಹರಿಸಬೇಕಿತ್ತು. ಇದು ಸರಿಯಾದ ಕ್ರಮವಲ್ಲ.-ರಾಧಾ ಪೂಜಾರಿ,
ನಾವು ಪ್ರತಿ ದಿನ ಶಾಲೆಗೆ ಹೋಗಿದ್ದೇವೆ. ಎಲ್ಲ ವಿಷಯವನ್ನು ಚೆನ್ನಾಗಿ ಕಲಿತಿದ್ದೇವೆ. ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಹಿಂದಿ ವಿಷಯವನ್ನು ಅಧ್ಯಯನ ಮಾಡಿದ್ದೇವೆ. ಏಕೆ ಹಿಂದಿ ವಿಷಯವನ್ನು ಈ ರೀತಿ ಸರ್ಕಾರ ಮಾಡಿದೆ? ಗ್ರೇಡ್ ಬೇಡ ನಮಗೆ ಹಿಂದಿ ಪರೀಕ್ಷೆಯಲ್ಲಿ ನಮಗೆ ಬಂದ ಅಂಕಗಳು ನಮಗೆ ಬೇಕು ಅಷ್ಟೇ ಸರ್ಕಾರ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುವುದು ಸಲ್ಲದು.
-ಆಕಾಶ ಬಿರಾದಾರ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ.
ಸರ್ಕಾರ ಈ ಆದೇಶವನ್ನು ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿಯೇ ಹೊರಡಿಸಬೇಕಿತ್ತು. ಇದರಿಂದ ಮಕ್ಕಳ ಭಾವನೆಗಳಲ್ಲಿ ಹೆಚ್ಚು ಬದಲಾವಣೆಯಾಗುತಿತ್ತು. ಒಂದು ವೇಳೆ ಕಳೆದ ಸಾಲಿನಲ್ಲಿಯೆ ಗ್ರೇಡ್ ಕೊಟ್ಟಿದ್ದರೇ ಮಕ್ಕಳು ಅವರ ಕಷ್ಟದ ವಿಷಯದ ಕಡೆಗೆ ಹೆಚ್ಚು ಮುತುವರ್ಜಿ ವಹಿಸುತ್ತಿದ್ದರು. ಹಿಂದಿಯನ್ನು ಎಲ್ಲ ವಿಷಯಗಳಂತೆ ಮಕ್ಕಳು ಪ್ರಸ್ತುತ ಅಧ್ಯಯನ ಮಾಡಿದ್ದಾರೆ. ಅದಕ್ಕೆ ಗ್ರೇಡ್ ನೀಡುವುದಾಗಿ ಹೇಳಿದರೇ ಅವರು ಈ ವಿಷಯಕ್ಕೆ ಹಾಕಿದ ಶ್ರಮಕ್ಕೆ ಯಾರು ಫಲ ನೀಡುವರು? ಇದು ಬೇಡ ಈ ಬಾರಿ ಮಕ್ಕಳ ಹಿತಾಸಕ್ತಿಯಿಂದ ಅವರ ಶ್ರಮಕ್ಕೆ ಬೆಲೆ ಸಿಗಲಿ ಮುಂದೆ ಅನುಭವಿಗಳು ಚರ್ಚಿಸಿ ಕ್ರಮ ತೆಗೆದುಕೊಳ್ಳಲಿ. ಸರ್ಕಾರ ಸಮಾಜ ಮತ್ತು ನಾವು ಮಕ್ಕಳಿಗಾಗಿ ದುಡಿಯೋಣ ಅವರ ಭವಿಷ್ಯದ ಕಡೆಗೆ ಗಮನಹರಿಸೋಣ. ಇದು ಸರ್ಕಾರಕ್ಕೆ ನಮ್ಮ ಗೌರವದ ಮನವಿ.