ನವಲಗುಂದ: ಗುಡ್ಡದಲ್ಲಿ ಸ್ಥಗಿತಗೊಂಡಿದ್ದ ಗಣಿಗಾರಿಕೆ ಮತ್ತೆ ಕಳೆದ ಒಂದು ವಾರದಿಂದ ಆರಂಭಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪುರಸಭೆ ಮಾಲೀಕತ್ವದಲ್ಲಿನ ಸರ್ವೆ ನಂಬರ್ 499/1ರಲ್ಲಿ ಪಟ್ಟಣದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಗುಡ್ಡ ಆವರಿಸಿಕೊಂಡಿದೆ. ಈ ಗುಡ್ಡದ ಮುಂಭಾಗದಲ್ಲಿ ದೊರಕುವ ಸಮೃದ್ಧವಾದ ಮುರ್ರಂಗೆ ಬಹುಬೇಡಿಕೆ ಇದ್ದು, ಪ್ರಸ್ತುತ ಪ್ರಭಾವಿ ಗುತ್ತಿಗೆದಾರರೊಬ್ಬರು ಪುರಸಭೆಯಿಂದಾಲಿ ಅಥವಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದಾಗಲಿ ಪರವಾನಗಿ ಪಡೆಯದೇ 2ರಿಂದ 3 ಜೆಸಿಬಿಗಳಿಂದ ಗುಡ್ಡವನ್ನು ಅಗೆದು ಸಾಗಿಸುತ್ತಿದ್ದಾರೆ ಎಂದು ಪಟ್ಟಣದ ನಾಗರಿಕರು ಆರೋಪಿಸಿದ್ದಾರೆ.
ಪಟ್ಟಣದ ನಾಗರಿಕರು ಒಂದು ಚಕ್ಕಡಿಯಷ್ಟು ಮರ್ರಂ ಅಗೆದರೆ ದಂಢ ವಿಧಿಸುವ ಪುರಸಭೆ ಅಧಿಕಾರಿಗಳು ಪ್ರಸ್ತುತ ಸಾವಿರಾರು ಟಿಪ್ಪರನಷ್ಟು ಮುರ್ರಂ ಅಗೆದರೂ ಕ್ರಮ ಕೈಗೊಳ್ಳದಿರುವುದೂ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹೋರಾಟ
ಮೈಲಾರಪ್ಪ ವೈದ್ಯ, ರೈತ ಮುಖಂಡ
ಪುರಸಭೆಯಾಗಲಿ ಅಥವಾ ಭೂ ವಿಜ್ಞಾನ ಇಲಾಖೆಯಿಂದಾಗಲಿ ಪರವಾನಗಿ ಪಡೆಯದೇ ಗುಡ್ಡವನ್ನು ಅಗೆಯುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪುರಸಭೆ ಆದಾಯಕ್ಕೆ ಧಕ್ಕೆ ತರುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದ್ದು, ಗುಡ್ಡದಲ್ಲಿ ಅಗೆದ ಮರ್ರಂನ್ನು ಪಟ್ಟಣದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದು, ಈ ಕುರಿತು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಅವರಿಂದ ಲಿಖಿತ ರೂಪದಲ್ಲಿ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸುಧೀರ ಸಾಹುಕಾರ, ತಾಲೂಕು ದಂಡಾಧಿಕಾರಿ