ಒಳ ಮೀಸಲಾತಿಗೆ ಸ್ವಾಗತಿಸಿ ಕೆನೆಪದರ ನೀತಿ ಜಾರಿಗೆ ವಿರೋಧ

KannadaprabhaNewsNetwork | Published : Aug 5, 2024 12:31 AM

ಸಾರಾಂಶ

ಒಳ ಮೀಸಲಾತಿಯನ್ನು ಕೂಡಲೇ ಅನುಷ್ಟಾನಗೊಳಿಸಬೇಕು. ಹಾಗೆಯೇ ಕೆನೆಪದರ ನೀತಿಯನ್ನು ಕೈಬಿಡಬೇಕು. ಈ ಕುರಿತು ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣ ನಡೆಸಬೇಕು ಎಂದು ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಸಮಿತಿ ಒತ್ತಾಯಿಸಿದೆ.ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗಾಗಿ ಹಿರಿಯರು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಒಂದು ಹಂತಕ್ಕೆ ತಲುಪಿದೆ ಎಂದು ವಕೀಲರಾದ ಗಂಗಾಧರ್‌ ಬಹುಜನ್ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಎಸ್ಸಿ, ಎಸ್ಟಿ ಒಳಮೀಸಲಾತಿ ಘೋಷಣೆಯಾದ ನಂತರದಲ್ಲಿ ನಗರದ ಸ್ವಾಭಿಮಾನಿ ಭವನದಲ್ಲಿ ಭಾನುವಾರ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಸಮಿತಿ ಅಡಿಯಲ್ಲಿ ಸಭೆ ನಡೆಸಿ ಒಳ ಮೀಸಲಾತಿಯನ್ನು ಕೂಡಲೇ ಅನುಷ್ಟಾನಗೊಳಿಸಬೇಕು. ಹಾಗೆಯೇ ಕೆನೆಪದರ ನೀತಿಯನ್ನು ಕೈಬಿಡಬೇಕು. ಈ ಕುರಿತು ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣ ನಡೆಸಬೇಕು ಎಂದು ತೀರ್ಮಾನಿಸಲಾಯಿತು.

ಬಿ.ಎಸ್.ಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲರಾದ ಗಂಗಾಧರ್‌ ಬಹುಜನ್ ಉದ್ದೇಶಿಸಿ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗಾಗಿ ಹಿರಿಯರು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಒಂದು ಹಂತಕ್ಕೆ ತಲುಪಿದೆ. ಅತಿ ಹೆಚ್ಚು ಪರಿಶಿಷ್ಟ ಜಾತಿಯವರು ಇರುವ ಪಂಜಾಬಿನಲ್ಲಿ ೧೯೭೫ನೇ ಇಸವಿಯಲ್ಲಿ ಈ ಹೋರಾಟ ಪ್ರಾರಂಭವಾಗುತ್ತದೆ. ಅಲ್ಲಿನ ಸರ್ಕಾರ ಒಳ ಮೀಸಲಾತಿಯ ವರ್ಗೀಕರಣ ಮಾಡಿ ಪರಿಶಿಷ್ಟ ಜಾತಿಗಳಿಗೆ ಚಾಲನೆ ಕೊಡುವ ಕೆಲಸ ಮಾಡಿರುವುದು ಪಂಜಾಬ್ ರಾಜ್ಯ. ಇದನ್ನೇ ಅನುಸರಿಸಿ ಮುಂದುವರೆಸಿರುವುದು ಹರಿಯಾಣ ರಾಜ್ಯ. ಈ ಎರಡು ರಾಜ್ಯಗಳ ಪ್ರೇರಣೆ ಪಡೆದುಕೊಂಡ ಆಂಧ್ರ ಪ್ರದೇಶದಲ್ಲಿ ಈ ಕೂಗು ಹಬ್ಬಿದೆ. ಹರಿಯಾಣದಿಂದ ಪ್ರೇರಣೆ ಹೊಂದಿರುವುದು ಕರ್ನಾಟದವರು. ಈ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರರು, ದಲಿತ ಸಮಿತಿ, ರಾಜಕೀಯ ಮುಖಂಡರು, ರಾಜಕೀಯ ಪಕ್ಷದವರು ಎಲ್ಲರೂ ಕೂಡ ಕಷ್ಟಪಟ್ಟು ಸಹಕರಿಸಿದ್ದಾರೆ. ಈ ವಿಚಾರವಾಗಿ ಚಳವಳಿಯಷ್ಟೆ ಅಲ್ಲ ರಕ್ತ ಕೂಡ ಸುರಿಸಿದ್ದೇವೆ. ಇವೆಲ್ಲಾ ಹೋರಾಟದ ಪ್ರತಿಫಲ ಒಳಮೀಸಲಾತಿ ತೀರ್ಪು ಹೊರಬಂದಿದೆ. ಈ ಒಳಮೀಸಲಾತಿ ಅನುಷ್ಠಾನದ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಹಿಸುತ್ತದೆ. ಕಾಯಿದೆ, ಕಾನೂನು ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ. ಇದನ್ನು ಏನಿದ್ದರೂ ಕೇಂದ್ರವೇ ಮಾಡಬೇಕು. ಆರ್ಟಿಕಲ್‌ ೩೪೦, ೩೪೧ ನಲ್ಲಿ ಅದು ಕೇಂದ್ರ ಸರ್ಕಾರವೇ ಮಾಡಬೇಕು, ರಾಜ್ಯಸರ್ಕಾರ ಮಾಡುವಾಗಿಲ್ಲ ಎಂದು ರದ್ದುಗೊಳಿಸಲಾಗಿತ್ತು. ಮತ್ತೆ ಸುಪ್ರಿಂಕೋರ್ಟ್‌ಗೆ ಎತ್ತಿ ಹಿಡಿದಾಗ ಇದು ಸಂವಿಧಾನ ಬದ್ಧವಾಗಿದೆ ಇದನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕು ಎಂದು ಹೇಳಿದೆ ಎಂದು ಕಿವಿಮಾತು ಹೇಳಿದರು.

ಈ ತೀರ್ಪಿನ ಅನುಸಾರವಾಗಿ ಸಂಬಂಧಪಟ್ಟ ಮಸೂದೆ ತರಬೇಕಾಗುತ್ತದೆ. ಸದಾಶಿವ ಆಯೋಗ ಏನಿದೆ ಬಗ್ಗೆ ಹೇಳ್ಳುತ್ತಿದ್ದೇವೆ ಹೊರತು ಆ ಬಗ್ಗೆ ಪೂರ್ಣವಾಗಿ ತಿಳಿದಿರುವುದಿಲ್ಲ. ಅದರ ಪ್ರಕಾರವೇ ಮೀಸಲಾತಿ ವರ್ಗೀಕರಣ ಹಂಚಿಕೆ ಆಗಬೇಕಾ! ಅದರೊಳಗೆ ಏನಾದರೂ ಲೋಪದೋಷಗಳಿವೆಯೇ ಎನ್ನುವುದನ್ನು ಗಮನಹರಿಸಿ ಜಾರಿ ಮಾಡಿದರೇ ಗೊತ್ತಾಗುತ್ತದೆ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಇದೇ ವೇಳೆ ಒಳ ಮೀಸಲಾತಿಗಾಗಿ ಹೋರಾಟ ಮಾಡಿದಂತಹ ಕೇಂದ್ರ ಸಚಿವ ನಾರಾಯಣಸ್ವಾಮಿ, ಆಂಜನೇಯವರಿಗೆ ಸಭೆಯಲ್ಲಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಲಾಯಿತು. ಸುಪ್ರಿಂಕೋರ್ಟ್‌ಗೆ ಈ ಪ್ರಕರಣ ತೆಗೆದುಕೊಂಡು ಹೋದ ಪಾರ್ಥಸಾರಥಿ ಅವರು ಮರಣ ಹೊಂದಿದ ಹಿನ್ನೆಲೆಯಲ್ಲಿ ಎದ್ದುನಿಂತು ಎರಡು ನಿಮಿಷ ಮೌನ ಆಚರಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಗೌರವ ಸೂಚಿಸಲಾಯಿತು. ನಂತರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಕೆಲ ಸಮಯ ಜೈಕಾರ ಹಾಕಿದರು.

ಇದೇ ವೇಳೆ ಸಭೆಯಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್‌. ವಿಜಯಕುಮಾರ್‌, ವಕೀಲ ರಾಜೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್‌, ರಾಜ್ಯ ಸಂಘಟನಾ ಸಂಚಾಲಕ ಅಂಬೂಗ ಮಲೇಶ್, ಹಿರಿಯ ಮುಖಂಡ ಎಚ್‌.ಕೆ. ಸಂದೇಶ್, ಕೆ. ಈರಪ್ಪ, ರಂಗಪ್ಪ, ದೇವರಾಜು, ಸ್ಟೂಡೆಂಟ್ ಫೆಡರೇಶನ್‌ ಆಫ್ ಇಂಡಿಯಾದ ರಮೇಶ್, ಸತೀಶ್, ಪ್ರವೀಣ್, ಚಿಕ್ಕಣ್ಣ, ಶಿಕ್ಷಣ ಇಲಾಖೆ ಡಿಡಿಪಿಐ ನಿವೃತ್ತ ಉಪನಿರ್ದೇಶಕರಾದ ಎನ್.ಡಿ. ಸಾಲಿ, ವೀರಭದ್ರಪ್ಪ, ಜಾವಗಲ್ ಇಂದ್ರೇಶ್, ಹಳೇಬೀಡು ಭೈರೇಶ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೃಷ್ಣದಾಸ್ ಎಚ್.ಪಿ. ಶಂಕರ್ ರಾಜು, ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಸುವರ್ಣ, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಜಿ.ಒ. ಮಹಾಂತಪ್ಪ ಸಹ ಕಾರ್ಯದರ್ಶಿ ವಸಂತ ಕುಮಾರ್‌, ಎ.ಟಿ. ಮಂಜುನಾಥ, ಎಚ್.ಎಂ. ಮಹೇಶ್, ಹೇಮಂತ್ ಕುಮಾರ್ ಇತರರು ಉಪಸ್ಥಿತರಿದ್ದರು.

Share this article