ಸರ್ಕಾರದ ವಿವಿಧ ಯೋಜನೆಯ ಅಕ್ಕಿಯನ್ನು ಅನಧಿಕೃತವಾಗಿ ದಾಸ್ತಾನು, ಸಾಗಾಣಿಕೆ ಮಾಡುತ್ತಿರುವಾಗ ಆಹಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರದ ವಿವಿಧ ಯೋಜನೆಯ ಅಕ್ಕಿಯನ್ನು ಅನಧಿಕೃತವಾಗಿ ದಾಸ್ತಾನು, ಸಾಗಾಣಿಕೆ ಮಾಡುತ್ತಿರುವಾಗ ಆಹಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ಅಕ್ಕಿಯನ್ನು ದಾಸ್ತಾನು ಮಾಡಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೂರವಾಣಿ ಕರೆಯ ಮಾಹಿತಿ ಆಧರಿಸಿ ಜುಲೈ 8 ರಂದು ರಾತ್ರಿ ಆಹಾರ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಅಧಿಕಾರಿಗಳ ತಂಡ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಸಮೀಪದ ಬುದ್ಧಿ ಗ್ರಾಮದಲ್ಲಿ ದಾಳಿ ನಡೆಸಿ ಸಾಗಣೆ ಮಾಡುತ್ತಿದ್ದ 150 ಕ್ವಿಂಟಾಲ್ ಅಕ್ಕಿ,ವಾಹನ ವಶಕ್ಕೆ ಪಡೆದಿದ್ದಾರೆ. ಬುಧವಾರ ಮುಧೋಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ 14.75 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿ ಆಹಾರ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
2024-25ನೇ ಸಾಲಿನಲ್ಲಿ 16 ಪ್ರಕರಣಗಳನ್ನು ದಾಖಲಿಸಿ 1020.32 ಕ್ವಿಂಟಾಲ್ ಅಕ್ಕಿ ಹಾಗೂ 12 ವಾಹನ ಜಪ್ತಿ ಮಾಡಿದ್ದು, 29 ಜನರನ್ನು ಬಂಧಿಸಲಾಗಿದೆ. ಏಪ್ರಿಲ್ ನಿಂದ ಈವರೆಗೆ 12 ಪ್ರಕರಣ ದಾಖಲಿಸಿ 391.02 ಕ್ವಿಂಟಾಲ್ ಅಕ್ಕಿ ಹಾಗೂ 6 ವಾಹನಗಳನ್ನು ಜಪ್ತಿ ಮಾಡಿ 20 ಜನರನ್ನು ಬಂಧಿಸಿ, ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳು ಆಯಾ ತಾಲೂಕುಗಳ ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಸರ್ಕಾರದ ವಿವಿಧ ಯೋಜನೆಯ ಆಹಾರಧಾನ್ಯ ದುರ್ಬಳಕೆ ಕುರಿತು ದೂರುಗಳಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯವಾಣಿ: 112, 9480803900 55 ಆಹಾರ ಇಲಾಖೆಯ ಸಹಾಯವಾಣಿ 1967 ದೂರವಾಣಿ 08354-235094 ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಇಲ್ಲವೇ ಸಂಬಂಧಿಸಿದ ತಾಲೂಕಿನ ತಹಸೀಲ್ದಾರ ಕಚೇರಿಯ ಆಹಾರ ನಿರೀಕ್ಷಕರಿಗೆ ದೂರು ನೀಡಬಹುದಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.