ಮಲೆನಾಡಿನಾದ್ಯಂತ ನಿಲ್ಲದ ಗುಡುಗು ಸಹಿತ ವರ್ಷಧಾರೆ : ವಿವಿಧೆಡೆ ಸಣ್ಣ ಪುಟ್ಟ ಅನಾಹುತ

KannadaprabhaNewsNetwork |  
Published : Mar 27, 2025, 01:06 AM ISTUpdated : Mar 27, 2025, 01:14 PM IST
ನರಸಿಂಹರಾಜಪುರ ತಾಲೂಕಿನ ಬೆಮ್ಮನೆಯ ಶ್ರೀಧರ ಎಂಬುವರ ದನದ ಕೊಟ್ಟಿಗೆ ಮೇಲೆ ಅಡಿಕೆ ಮರ ಉರುಳಿ ಕೊಟ್ಟಿಗೆಯ ಮೇಲ್ಚಾವಣಿಗೆ ಹಾಕಿದ್ದ ಶೀಟುಗಳಿಗೆ ಹಾನಿಯಾಗಿದೆ. | Kannada Prabha

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಬುಧವಾರವೂ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದೆ. ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಸಾಧಾರಣ ಮಳೆಯಾದರೆ, ಚಿಕ್ಕಮಗಳೂರಿನ ಗ್ರಾಮೀಣ ಪ್ರದೇಶದಲ್ಲಿ ಮಧ್ಯಾಹ್ನ ಮಳೆ ಬಂದಿದೆ.  

 ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡಿನಲ್ಲಿ ಬುಧವಾರವೂ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದೆ. ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಸಾಧಾರಣ ಮಳೆಯಾದರೆ, ಚಿಕ್ಕಮಗಳೂರಿನ ಗ್ರಾಮೀಣ ಪ್ರದೇಶದಲ್ಲಿ ಮಧ್ಯಾಹ್ನ ಮಳೆ ಬಂದಿದೆ. 

 ಎನ್‌.ಆರ್‌.ಪುರದಲ್ಲೂ, ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ, ಶೃಂಗೇರಿ ತಾಲೂಕಿನಾದ್ಯಂತ ಗುಡುಗು ಸಹಿತ ಮಳೆ ಬಂದಿದೆ.ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಫಲ್ಗುಣಿ, ಸಬ್ಬೆನಹಳ್ಳಿ ಮುಂತಾದ ಕಡೆ ಮಳೆಯಾಗಿದೆ. 

ಭಾರೀ ಗಾಳಿಗೆ ಬಾಳೂರು ಸಮೀಪದ ಕಲ್ಲಕ್ಕಿ ಮುಖ್ಯ ರಸ್ತೆಗೆ ಮರ ಉರುಳಿ ಕೆಲವು ಕಾಲ ಸಂಚಾರ ಸ್ಥಗಿತವಾಗಿತ್ತು. ಸ್ಥಳೀಯರಿಂದ ಮರ ವನ್ನು ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮರ ಬಿದ್ದ ಪರಿಣಾಮದಿಂದ ಶೃಂಗೇರಿ ಕೊಟ್ಟಿಗೆಹಾರ ರಸ್ತೆ ಕೆಲ ಕಾಲ ಸಹಿತಗೊಂಡಿತ್ತು. ಕಾಫಿ ಬೆಳೆಗೆ ನೀರಿಲ್ಲದೆ ಕಾಫಿ ಗಿಡಗಳು ಹೂ ಅರಳಿ ಒಣಗುತ್ತಿದ್ದು ಮಳೆಯಿಂದ ಕಾಫಿ ಬೆಳೆಗೆ ಅನುಕೂಲವಾಯಿತು. ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

ಶೃಂಗೇರಿಯಲ್ಲಿ ಗುಡುಗು ಸಹಿತ ಆರ್ಭಟಿಸಿದ ಮಳೆ

ತಾಲೂಕಿನಾದ್ಯಂತ ಬುಧವಾರ ಗುಡುಗು ಸಿಡಿಲು ಆರ್ಭಟದೊಂದಿಗೆ ಗಾಳಿ ಸಹಿತ ಭಾರೀ ಮಳೆ ಅಬ್ಬರಿಸಿತು. ಮಧ್ಯಾಹ್ನ ದಿಂದ ಶೃಂಗೇರಿ ಪಟ್ಟಣ ಸಹಿತ ಗ್ರಾಮೀಣ ಪ್ರದೇಶದೆಲ್ಲೆಡೆ ಮಳೆಯಾಗಿದ್ದು, ಕುಂಚೇಬೈಲು ಕಣದ ಮನೆ ಸಮೀಪ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿ, ಲೈನ್ ಹಾನಿಯಿಂ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ತ್ಯಾವಣ ಬಳಿ ವಿದ್ಯುತ್ ಲೈನ್, ರಸ್ತೆ ಮೇಲೆ ಮರ ಉರುಳಿ ಬಿದ್ದು ವಿದ್ಯುತ್ ಲೈನ್ ತುಂಡಾಗಿತ್ತು. ಮಂಗಳೂರು ಶಿವಮೊಗ್ಗ ರಾ.ಹೆ. 169 ರ ಶೃಂಗೇರಿ ತ್ಯಾವಣ ಕೆಎಸ್ಆರ್ ಟಿ ಸಿ ಡಿಪೋ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಗುಡ್ಡದ ಮಣ್ಣು ರಸ್ತೆ ಮೇಲೆ ಬಿದ್ದಪರಿಣಾಮ ರಸ್ತೆಯೆಲ್ಲ ಕೆಸರುಮಯವಾಗಿ ಸಂಚಾರಕ್ಕೆ ಅಡಚಣೆಯಾಗಿದೆ.

ಮಧ್ಯಾಹ್ನ ಗುಡುಗು ಸಿಡಿಲಿನ ಆರ್ಭಟ, ಗಾಳಿ ಅಬ್ಬರದಿಂದ ವಿದ್ಯುತ್ ಕಡಿತಗೊಂಡಿದ್ದು ಜನಜೀವನ ತತ್ತರಿಸಿದೆ. ನೆಮ್ಮಾರು, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತು. ಬುಧವಾರ ಸಂಜೆಯವರೆಗೂ ಮಳೆಯ ಆರ್ಭಟ ಮುಂದುವರಿದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೊಬೈಲ್, ದೂರವಾಣಿ ವ್ಯವಸ್ಥೆ ಅಸ್ತವ್ಯಸ್ಥ ವಅಗಿರುವ ನಡುವೆ ಕಳೆದೆರೆಡು ದಿನಗಳಿಂದ ಸುರಿದ ಮಳೆ ಬಿಸಿಲ ಧಗೆಗೆ ತಂಪೆರೆದಿದೆ. 

ನರಸಿಂಹರಾಜಪುರದಲ್ಲಿ ಅಬ್ಬರಿಸಿದ ವರುಣ 

ನರಸಿಂಹರಾಜಪುರ: ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ 3ರಿಂದ 4 ಗಂಟೆವರೆಗೆ ಭಾರೀ ಗಾಳಿ, ಗುಡುಗು ಸಹಿತ ಈ ವರ್ಷದ ಮೊದಲ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆಯಿಂದ ತುಸು ನೆಮ್ಮದಿ ಉಂಟಾಗಿದೆ.

 ಭಾರೀ ಗಾಳಿ ಬೀಸಿದ್ದರಿಂದ ಅಲ್ಲಲ್ಲಿ ವಿದ್ಯುತ್‌ ತಂತಿ ಮೇಲೆ ಮರದ ಗೆಲ್ಲು ಬಿದ್ದು ವಿದ್ಯುತ್‌ ತಂತಿ ತುಂಡಾಗಿದೆ. ನಾಗರಮಕ್ಕಿ ಸಮೀಪದ ರಸ್ತೆ ಮೇಲೆ ಗಾತ್ರದ ಮರ ಉರುಳಿ ಕೆಲವು ಸಮಯ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಮರ ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಉರುಳಿದ ಅಡಕೆ ಮರ: ತಾಲೂಕಿನ ಸೀತೂರು ಗ್ರಾಪಂ ವ್ಯಾಪ್ತಿಯ ಬೆಮ್ಮನೆಯಲ್ಲಿ ಶ್ರೀಧರ ಎಂಬುವರ ದನದ ಕೊಟ್ಟಿಗೆ ಮೇಲೆ ಅಡಕೆ ಮರ ಉರುಳಿ ಬಿದ್ದು ಕೊಟ್ಟಿಗೆ ಮೇಲ್ವಾಚಾವಣಿಗೆ ಹಾನಿಯಾಯಿತು. ಹೆರಂದೂರು ದಿವಾಕರ, ಎಚ್‌.ಇ. ಶ್ರೀನಿವಾಸ, ಕೊನೋಡಿ ನಾಗೇಂದ್ರ, ಕೊಡಿಗೆಬೈಲು ಜಯರಾಂ, ಗುರುಮೂರ್ತಿ ಮುಂತಾದವರ ಅಡಕೆ ತೋಟದಲ್ಲಿ ಭಾರೀ ಗಾಳಿಗೆ ಅಡಕೆ ಮರಗಳು ಉರುಳಿ ಬಿದ್ದಿವೆ. ತಾಲೂಕಿನ ಚಿಟ್ಟಿಕೊಡಿಗೆ, ಸುತ್ತ, ಗಡಿಗೇಶ್ವರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ತಂತಿ ಮೇಲೆ ಮರ ಉರುಳಿ ಬಿದ್ದಿದ್ದು ವಿದ್ಯುತ್‌ ಸ್ಥಗಿತಗೊಂಡಿದೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!