ಕನ್ನಡಪ್ರಭ ವಾರ್ತೆ ಹುಣಸೂರು
ಎಸ್ಟಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿ 2ನೇ ವಾರ್ಡಿನ ಪಕ್ಷೇತರ ಸದಸ್ಯೆ ಆಶಾ ಕೃಷ್ಣನಾಯಕ ಅವಿರೋಧವಾಗಿ ಆಯ್ಕೆಯಾದರು.
ಹುಣಸೂರು ನಗರಸಭೆಯಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಡಿಎ ಮೈತ್ರಿಕೂಟದ ಅಭ್ಯರ್ಥಿ ಶರವಣ ಸ್ವಪಕ್ಷ ಜೆಡಿಎಸ್ ನ 7 ಮತಗಳು, ಬಿಜೆಪಿಯ 3, ಐವರು ಪಕ್ಷೇತರರು, ಶಾಸಕ ಜಿ.ಡಿ. ಹರೀಶ್ ಗೌಡ ಮತ್ತು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಒಟ್ಟು 2 ಮತಗಳು) ಮತಗಳೊಂದಿಗೆ ಒಟ್ಟು 17 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸ್ವಾಮಿಗೌಡ ಸ್ವಪಕ್ಷದ 13 ಮತಗಳು ಮತ್ತು ಎಸ್.ಡಿಪಿಐನ 2 ಮತಗಳೊಂದಿಗೆ ಒಟ್ಟು 15 ಮತಗಳನ್ನು ಗಳಿಸಿ ಪರಾಭವಗೊಂಡರು.ಶರವಣ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಶಾ ಕೃಷ್ಣನಾಯಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಚ್.ಬಿ. ವಿಜಯಕುಮಾರ್ ಘೋಷಿಸಿದರು. ಪೌರಾಯುಕ್ತೆ ಮಾನಸ ಮತ್ತು ಚುನಾವಣಾ ಸಿಬ್ಬಂದಿ ಇದ್ದರು.
ಜೆಡಿಎಸ್ ನ ಸದಸ್ಯ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಗಾಣಿಗ ಸಮಾಜದ ಶರವಣ ಮೊದಲಿನಿಂದಲೂ ಆಕಾಂಕ್ಷಿಯಾಗಿ ಇದ್ದರು. ಶಾಸಕ ಹರೀಶ್ ಗೌಡ ಅವರ ಸಮರ್ಥ ನಾಯಕತ್ವದಡಿ ಎಲ್ಲ ಪಕ್ಷೇತರರನ್ನೂ ಒಗ್ಗೂಡಿಸಿ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರು. ಮೈತ್ರಿಕೂಟದ ಲೆಕ್ಕಾಚಾರದಂತೆ 17 ಮತಗಳು ಪಕ್ಷದ ಅಭ್ಯರ್ಥಿ ಪರ ಬಂದವು. ವರ್ಷದ ಹಿಂದೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜಿಡಿಎಸ್ ನ ದಲಿತ ನಾಯಕ ಬಸವಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದ ಶಾಸಕ ಹರೀಶ್ ಗೌಡ 50 ವರ್ಷಗಳ ಟಿಎಪಿಸಿಎಂಎಸ್ ನ ಅವಧಿಯ ಇತಿಹಾಸ ನಿರ್ಮಿಸಿದ್ದರು. ಇದೀಗ ನಗರಸಭೆಯಲ್ಲೂ ಸೂಕ್ಷಾತಿಸೂಕ್ಷ್ಮ ಸಮುದಾಯವಾಗಿರುವ ಗಾಣಿಗ ಸಮಾಜದ ಸದಸ್ಯನಿಗೆ ಅಧ್ಯಕ್ಷಗಿರಿ ಕೊಡಿಸುವಲ್ಲಿ ಯಶಸ್ವಿಯಾದರು.
ಪಕ್ಷೇತರ ಸದಸ್ಯರಾದ ಸತೀಶ್ ಕುಮಾರ್, ಮಾಲಿಕ್ ಪಾಷ, ದೊಡ್ಡಹೆಜ್ಜೂರು ರಮೇಶ್, ಪರ್ವೀನ್ ತಾಜ್ , ಆಶಾ ಕೃಷ್ಣನಾಯಕ ಈ ಎಲ್ಲ ಪಕ್ಷೇತರರೂ ಎನ್.ಡಿಯ ಮೈತ್ರಿಕೂಟದ ಅಭ್ಯರ್ಥಿ ಪರ ಗಟ್ಟಿಯಾಗಿ ನಿಂತಿದ್ದು ಜೆಡಿಎಸ್ ಅಭ್ಯರ್ಥಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಗೆಲುವಿನ ನಂತರ ಶಾಸಕ ಹರೀಶ್ ಗೌಡ ಮತ್ತು ನಗರಸಭೆ ಅಧ್ಯಕ್ಷ ಶರವಣರೊಂದಿಗೆ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮೂಲಕ ಪಕ್ಷದ ಕಚೇರಿಗೆ ತೆರಳಿದರು.
ಕಾಂಗ್ರೆಸ್ ಸದಸ್ಯ ದೇವನಾಯ್ಕ ಚುನಾವಣೆಗೆ ಗೈರಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತ್ತು. ಚುನಾವಣೆ ಸಂಪನ್ನಗೊಂಡ ನಂತರ ನಗರಸಭೆ ಆವರಣದಲ್ಲಿ ಒಂದೆಡೆ ಜೆಡಿಎಸ್-ಬಿಜೆಪಿ ಪಟಾಕಿ ಸಿಡಿಸಿ, ಬಾವುಟ ಬೀಸುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಇತ್ತ ಕಾಂಗ್ರೆಸ್ ಕೆಲ ಕಾರ್ಯಕರ್ತರು ದೇವನಾಯ್ಕರ ವಿರುದ್ಧ 30 ಲಕ್ಷಕ್ಕೆ ಮಾರಾಟವಾದ ದೇವನಾಯ್ಕರಿಗೆ ಧಿಕ್ಕಾರ ಮುಂತಾದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡು ಬಂದಿತು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ನಗರಸಭೆಯ ನೂತನ ಉಪಾಧ್ಯಕ್ಷೆ ಆಶಾ ಕೃಷ್ಣನಾಯ್ಕ, ಸದಸ್ಯರಾದ ದೇವರಾಜ್, ಕೃಷ್ಣರಾಜ ಗುಪ್ತ, ಶಾಹಿನ್ ತಾಜ್, ಶ್ರೀನಾಥ್, ರಾಣಿ ಪೆರುಮಾಳ್, ರಾಧ, ಬಿಜೆಪಿಯ ಗಣೇಶ್ ಕುಮಾರಸ್ವಾಮಿ, ವಿವೇಕಾನಂದ, ಹರೀಶ್, ಪಕ್ಷೇತರರಾದ ಮಾಲಿಕ್‌ಪಾಷ, ಸತೀಶ್‌ಕುಮಾರ್, ದೊಡ್ಡಹೆಜ್ಜೂರು ರಮೇಶ್, ಪರ್ವೀನ್ ತಾಜ್, ಜೆಡಿಎಸ್ ಮತ್ತು ಬಿಜೆಪಿ ಇದ್ದರು.