ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘಟನೆಗಳ ಜಿಲ್ಲಾ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಎಸ್ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುತ್ತಿರುವುದನ್ನು ವಿರೋಧಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ರಾಷ್ಟ್ರಪತಿಗೆ ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ದೇಶದ ದೊಡ್ಡ ಸಂಖ್ಯೆಯ ಮತದಾರರ ಹಕ್ಕನ್ನೇ ಕಸಿಯುವ ಎಸ್ಐಆರ್ ಪ್ರಕ್ರಿಯೆಯು ಅಪ್ರಜಾತಾಂತ್ರಿಕವಷ್ಟೇ ಅಲ್ಲದೇ, ಬಡವರ ಬದುಕುವ ಹಕ್ಕನ್ನು ಕಸಿಯುವ ರಾಜಕೀಯ ಕುತಂತ್ರವಾಗಿದೆ. ಮುಖ್ಯ ಚುನಾವಣಾ ಆಯೋಗ ಯಾರ ಅನುಮತಿಯನ್ನೂ ಪಡೆಯದೆ ಏಕ ಪಕ್ಷಿಯ ನಿರ್ಧಾರ ಕೈಗೊಳ್ಳುತ್ತಾ ಬರುತ್ತಿದೆ ಎಂದರು.ಚುನಾವಣಾ ಆಯೋಗದ ಸದಸ್ಯರು 10 ತಿಂಗಳಲ್ಲಿ 14 ಬಾರಿ ಪ್ರಶ್ನೆ ಮಾಡಿದ್ದರೂ, ಅದರ ಬಗ್ಗೆ ಕಿಂಚಿತ್ತೂ ಕಿವಿಗೊಡದ ಮುಖ್ಯ ಚುನಾವಣಾ ಆಯುಕ್ತರು ತನ್ನ ಕಾರ್ಯ ಮುಂದುವರಿಸಿದ್ದಾರೆ, ಪರಿಣಾಮ ದೇಶದಲ್ಲಿ ಸುಮಾರು 13 ಕೋಟಿ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. 13 ಕೋಟಿ ಜನಸಂಖ್ಯೆಯಲ್ಲಿ ಬಹುಪಾಲು ಕೂಲಿ ಕಾರ್ಮಿಕರು, ರೈತಾಪಿ ಜನ, ದಾಖಲೆ ಹೊಂದದೇ ಹಿಂದುಳಿದವರು ಎಂದು ಅವರು ತಿಳಿಸಿದರು.
ಮತದಾನದ ಹಕ್ಕಿಲ್ಲವೆಂದರೆ ಸರ್ಕಾರದ ಇಂತಹ ಧೋರಣೆಯನ್ನು ಖಂಡಿಸಬೇಕು ಎಂದು ಕರೆ ನೀಡಿದರು.
ಈಗಾಗಲೇ ದೇಶ ಬಿಕ್ಕಟ್ಟಿನಲ್ಲಿದ್ದು, ನಿರುದ್ಯೋಗ ಸಮಸ್ಯೆ, ಹಲವಾರು ಪ್ರಶ್ನೆಪತ್ರಿಕೆ ಸೋರಿಕೆ ಮಧ್ಯೆಯೂ ದೊಡ್ಡ ಸಂಖ್ಯೆಯ ಮತದಾರರನ್ನು ಕಿತ್ತು ಹಾಕುವ ಹುನ್ನಾರ ನಡೆದಿದೆ. 2002ರಲ್ಲಿ ವಿದ್ಯಾಭ್ಯಾಸ ಮಾಡದ ಬಹುತೇಕ ದೇಶ ವಾಸಿಗಳಿಗೆ ಮೂಲ ದಾಖಲೆಗಳೇ ಇಲ್ಲ. ಬ್ಯಾಂಕ್ ಖಾತೆ, ಶಾಲೆ ಮುಖವನ್ನೂ ನೋಡದವರಿಗೆ 10ನೇ ತರಗತಿ ಅಂಕ ಪಟ್ಟಿ ಸಿಗಲು ಹೇಗೆ ಸಾಧ್ಯ?
ಎಐಎಸ್ಎಫ್ ಜಿಲ್ಲಾಧ್ಯಕ್ಷ ಹಾಲೇಶ, ವಿವಿಧ ಸಂಘಟನೆಗಳ ಎಚ್.ಡಿ.ಗಂಗಾಧರ, ಪ್ರವೀಣ, ಸಂಜುನಾಯ್ಕ, ಪವನ, ಅಮೃತಾ, ಪಿ.ಜಿ.ಪ್ರಮೋದ, ಸ್ವಾಮಿ, ಸಂಜಯ, ಹಾಲೇಶ, ಶರತ್, ಮುಷರಫ್, ಭರತ್ ಇತರರು ಇದ್ದರು.