ಭಾಷೆಯ ಪರಂಪರೆ, ವರ್ತಮಾನ ಅರ್ಥ ಮಾಡಿಕೊಳ್ಳಿ

KannadaprabhaNewsNetwork |  
Published : Oct 23, 2024, 12:41 AM IST
20ಡಿಡಬ್ಲೂಡಿ11ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಡಾ. ಜಿ.ಎಸ್‌. ಆಮೂರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಹಳಗನ್ನಡ, ನಡುಗನ್ನಡ ಓದುವ ಅವಶ್ಯಕತೆ ಇಲ್ಲ ಎಂಬ ಪ್ರಶ್ನೆಗಳು ನವ್ಯ ಸಾಹಿತ್ಯದ ಆರಂಭದಲ್ಲಿ ಉದ್ಭವಿಸಿದ್ದವು. ನವ್ಯ ಮತ್ತು ನವೋದಯದ ಕಾರಣಗಳನ್ನು ಒಟ್ಟಾಗಿ ಅವಲೋಕಿಸಿದಾಗ ಯಾವ ಕಾಲಗಳು ಯಾವುದನ್ನು ಒಳಗೊಂಡವು, ಯಾವುದನ್ನು ಕೈ ಬಿಟ್ಟವು ಎಂಬುದು ಮುಖ್ಯವಾಗುತ್ತದೆ.

ಧಾರವಾಡ:

ಹಳಬರನ್ನು ಕಾಣದೆ ಹೊಸದನ್ನು ಕಟ್ಟುವ ಅಪೇಕ್ಷೆ ಸಾಧ್ಯವಾಗದ ಸತ್ಯ ಎಂಬುದನ್ನು ಕನ್ನಡ ಮಾತ್ರವಲ್ಲದೆ ಯಾವುದೇ ಭಾಷೆಯ ಪರಂಪರೆ ಮತ್ತು ವರ್ತಮಾನ ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಅಪರಾಧವಾಗಲಿದೆ. ಡಾ. ಜಿ.ಎಸ್‌. ಆಮೂರ ಅವರ ಕನ್ನಡ ಸಾಹಿತ್ಯ ವಿಮರ್ಶೆ ಕಟ್ಟಿದ ಬಗೆಯನ್ನು ಎಲ್ಲರೂ ತಿಳಿಯಬೇಕು ಎಂದು ವಿಮರ್ಶಕ ಎಚ್‌.ಎಸ್‌. ರಾಘವೇಂದ್ರರಾವ್‌ ಹೇಳಿದರು.

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಡಾ. ಜಿ.ಎಸ್‌. ಆಮೂರ ಜನ್ಮಶತಮಾನೋತ್ಸವ ಸಮಿತಿ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಡಾ. ಜಿ.ಎಸ್‌. ಆಮೂರ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಮರ್ಶಕ ಜಿ.ಎಸ್‌. ಆಮೂರ ಅವರು ಬರವಣಿಗೆಯ ಬದುಕಿನಲ್ಲಿ ತಪಸ್ಸಿನಂತೆ ಸಾಗಿಸಿದರು. ಅವರ ಕಾರ್ಯಗಳು ಬರಹಗಾರರಿಗೆ ಪ್ರೇರಕ ಶಕ್ತಿ ಎಂದರು.

ಆಮೂರರ ಬರವಣಿಗೆಯನ್ನು ಎರಡು (ಕನ್ನಡ ಮತ್ತು ಆಂಗ್ಲ) ಪರ್ವಗಳಲ್ಲಿ ಕಾಣಬಹುದು. ಅವರ 57ನೇ ವರ್ಷದ ವರೆಗೆ ಆಂಗ್ಲ ಪರ್ವದಲ್ಲಿ ತೊಡಗಿಕೊಂಡಿದ್ದರು. ನಂತರ ಕನ್ನಡ ಪರ್ವದಲ್ಲಿ ತೊಡಗಿದರು. ಅವರು ಕುವೆಂಪು, ಬೇಂದ್ರೆ, ಯು.ಆರ್‌. ಅನಂತಮೂರ್ತಿ, ನಿರಂಜನ ಅವೆರೆಲ್ಲರ ಕುರಿತು ಸಮಗ್ರ ಅಧ್ಯಯನ ಪುಸ್ತಕಗಳನ್ನು ರಚಿಸಿದ್ದಾರೆ. ಒಂದು ಕತೆ, ಕವಿತೆ, ನಾಟಕದ ಬಗ್ಗೆ ಪ್ರಾಯೋಗಿಕ ವಿಮರ್ಶೆಯನ್ನು ಬರೆದಿದ್ದಾರೆ ಎಂದರು.

ಒಳಗಿರುವ ಬೆಳಕು ಕೃತಿ ಕುರಿತು ಡಾ. ಜಿ.ಎಂ. ಹೆಗಡೆ ಮಾತನಾಡಿ, ಡಾ. ಜಿ.ಎಸ್‌. ಆಮೂರ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಮೃದ್ಧ ವಿಮರ್ಶಾ ಸಾಹಿತ್ಯ ಪರಂಪರೆ ನಿರ್ಮಾಣ ಮಾಡಿದ ವಿದ್ವತ್ತಿನ ಶಿಖರವಾಗಿದ್ದರು. ಈ ಪುಸ್ತಕದಲ್ಲಿ ಬೇಂದ್ರೆ ವಿಮರ್ಶೆಯ, ಅವರ ಓದಿನ ಆಳವಾದ ಜ್ಞಾನದ ಬೇರೆ ಬೇರೆ ಮುಖಗಳನ್ನು ಕಾಣುತ್ತೇವೆ. ಬೇಂದ್ರೆ ಕಾವ್ಯದ ಮುಖಗಳು, ಬೇಂದ್ರೆ ಜೀವನ, ಬೇಂದ್ರೆ ಕಾವ್ಯಧರ್ಮ, ಬೇಂದ್ರೆ ಅವರ ಕವ್ಯಾನುಸಂಧಾನ ಸೇರಿ ಇನ್ನೂ ಅನೇಕ ವಿಷಯಗಳನ್ನು ಈ ಕೃತಿ ಒಳಗೊಂಡಿದೆ ಎಂದರು.

ಕಥೆಗಾರ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ವಿಮರ್ಶಾ ಪರಂಪರೆಯಲ್ಲಿ ಧಾರವಾಡದ ವಿಮರ್ಶಾ ಪರಂಪರೆ ಗುರುತಿಸುವಂತಹ ಮೌಲಿಕ ವಿಮರ್ಶಾ ಕೃತಿಗಳನ್ನು ರಚಿಸಿದವರಲ್ಲಿ ಆಮೂರರ ಹೆಸರು ಮುಂಚೂಣಿಯಲ್ಲಿರುತ್ತದೆ. ಆಮೂರ ಅವರಿಗೆ ಭಾರತೀಯ ಸಾಹಿತ್ಯ ವಿಮರ್ಶೆಯಲ್ಲೂ ಗಣನೀಯ ಸ್ಥಾನ ಇದೆ ಎಂದರು.

ಜಿ.ಎಂ. ಹೆಗಡೆ ಸಂಪಾದಕತ್ವದ ಒಳಗಿರುವ ಬೆಳಕು ಕೃತಿಯನ್ನು ಡಾ. ರಮಾಕಾಂತ ಜೋಶಿ ಬಿಡುಗಡೆ ಮಾಡಿದರು. ಎಂ.ಎ. ಸುಬ್ರಹ್ಮಣ್ಯ, ಸಮೀರ ಜೋಶಿ, ಡಾ. ವೀಣಾ ಶಾಂತೇಶ್ವರ, ಡಾ. ಶ್ಯಾಮ ಆಮೂರ, ಆಮೂರ ಕುಟುಂಬಸ್ಥರು, ಇತರರು ಇದ್ದರು.

ರಾಘವೇಂದ್ರ ಪಾಟೀಲ ಸ್ವಾಗತಿಸಿದರು. ಡಾ. ಹ.ವೆಂ. ಕಾಖಂಡಕಿ ನಿರೂಪಿಸಿದರು. ನಂತರ ನಡೆದ ಪ್ರಬಂಧ ಮಂಡನೆ ಗೋಷ್ಠಿಯಲ್ಲಿ ಜಿ.ಎಸ್‌. ಆಮೂರ ಸೃಜನಶೀಲ ಬರಹಗಳು ಕುರಿತು ಎಸ್‌.ಆರ್‌. ವಿಜಯಶಂಕರ, ಅನುವಾದ ಸಿದ್ಧಾಂತ ಮತ್ತು ಅನುಸರಣೆ ಕುರಿತು ಅವರು ವಿಚಾರ ಮಂಡಿಸಿದರು. ಟಿ.ಪಿ. ಅಶೋಕ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ವಿಮರ್ಶಕ ರಾಜೇಂದ್ರ ಚೆನ್ನಿ, ಎಂ.ಎಸ್‌. ಆಶಾದೇವಿ, ಎಂ.ಜಿ. ಹೆಗಡೆ ಭಾಗವಹಿ ಆಮೂರರ ಸಾಹಿತ್ಯ ವಿಮರ್ಶ ಕುರಿತು ಚರ್ಚಿಸಿದರು. ಶ್ರೀಧರ ಹೆಗಡೆ ಭದ್ರನ್‌ ನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಡಾ. ಶ್ರೀರಾಮ ಭಟ್ಟಸಮಾರೋಪ ನುಡಿಗಳನ್ನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ