ಸಿ.ಕೆ.ನಾಗರಾಜ್‌

ಕನ್ನಡಪ್ರಭ ವಾರ್ತೆ ಹಂಪಿ

ಈ ಬಾರಿಯ ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ರೈತರು, ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಹಿರಿಯ ನಾಗರಿಕರು ಆಗಸದಲ್ಲಿ ಹಂಪಿ ನೋಡುವ ಭಾಗ್ಯವನ್ನು ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಒದಗಿಸಿದರು.

ಹಂಪಿ ಬೈ ಸ್ಕೈ ವೀಕ್ಷಣೆಗೆ ತೆರಳಿದ್ದ ವೇಳೆ, ಅಲ್ಲಿದ್ದ ಸರ್ಕಾರಿ ಶಾಲೆ ಮಕ್ಕಳನ್ನು ಕರೆದು, ಬನ್ನಿ... ಹೆಲಿಕಾಪ್ಟರ್‌ನಲ್ಲಿ ಹಾರಾಡಿ... ಎಂದು ಕರೆದ ಸಚಿವ ಜಮೀರ್‌ ಅವರು, ಇದೇ ವೇಳೆ ರೈತರು, ಪ್ರವಾಸಿ ಮಾರ್ಗದರ್ಶಿಗಳು, ಹಿರಿಯರ ನಾಗರಿಕರನ್ನು ಸಹ ಹೆಲಿಕಾಪ್ಟರ್‌ ಮೇಲೆ ಕಳುಹಿಸಿ, ಸ್ಥಳದಲ್ಲಿಯೇ ಹಣ ಪಾವತಿಸಿದರು.

ಇದೇ ವೇಳೆ ಮಾತನಾಡಿದ ಸಚಿವ ಜಮೀರ್‌ ಅಹಮದ್‌ ಖಾನ್‌, ಸರ್ಕಾರಿ ಶಾಲೆ ಮಕ್ಕಳೆಂದರೆ ನನಗೆ ಹೆಚ್ಚು ಪ್ರೀತಿ. ಅದೇ ರೀತಿ ರೈತರು ಈ ದೇಶಕ್ಕೆ ಅನ್ನ ನೀಡುವವರು ಎಂಬ ಕಾರಣಕ್ಕಾಗಿ ಆಗಸದಲ್ಲಿ ಹಂಪಿ ನೋಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.


ಹೆಲಿಕಾಪ್ಟರ್‌ ಹತ್ತುತ್ತಿದ್ದಂತೆಯೇ ಪುಳಕಗೊಂಡ ವಿದ್ಯಾರ್ಥಿಗಳು ಅನಿರೀಕ್ಷಿತವಾಗಿ ಸಿಕ್ಕ ಅವಕಾಶದಿಂದ ಸಂತಸಗೊಂಡರು. ವಿಮಾನ ಅಥವಾ ಹೆಲಿಕಾಪ್ಟರ್‌ ಆಗಸದಲ್ಲಿ ಹಾರಾಡುವಾಗ ಮನೆಯಿಂದ ಹೊರಗಡೆ ಓಡಿ ಬಂದು ನೋಡುತ್ತಿದ್ದೆವು. ಇದೀಗ ಹೆಲಿಕಾಪ್ಟರ್‌ನಲ್ಲಿಯೇ ಹಾರಾಡುವ ಅವಕಾಶ ದಕ್ಕಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಸಚಿವರಾದ ಜಮೀರ್‌ ಅಹಮದ್‌ ಖಾನ್‌ ಸರ್‌ ಅವರಿಗೆ ನಾವು ಅನಂತ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ವಿದ್ಯಾರ್ಥಿಗಳು ಭಾವುಕರಾದರು.