ಕಿತ್ತೂರು ಉತ್ಸವಕ್ಕೆ ಚನ್ನಮ್ಮ, ರಾಜಗುರು ವಂಶಸ್ಥರ ಕಡೆಗಣನೆ

KannadaprabhaNewsNetwork |  
Published : Oct 23, 2024, 12:41 AM IST

ಸಾರಾಂಶ

ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟೀಷರ ವಿರುದ್ಧ ವಿಜಯ ಪತಾಕೆ ಹಾರಿಸಿದ 200ನೇ ವರ್ಷಾಚರಣೆ ಕಾರ್ಯಕ್ರಮದ ಅದ್ಧೂರಿ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆದರೆ, ರಾಣಿ ಚನ್ನಮ್ಮನ ವಂಶಸ್ಥರು ಹಾಗೂ ಕಿತ್ತೂರು ಕಲ್ಮಠದ ರಾಜಗುರು ವಂಶಸ್ಥರಿಗೆ ಆಹ್ವಾನ ನೀಡದೇ ಕಡೆಗಣಿಸಿದೆ. ಈ ಮೂಲಕ ಜಿಲ್ಲಾಡಳಿತ ಚನ್ನಮ್ಮನ ಹಾಗೂ ರಾಜಗುರು ಸಂಸ್ಥಾನದ ವಂಶಸ್ಥರಿಗೆ ಅವಮಾನಿಸಿದೆ ಎಂಬ ಆರೋಪ ಕೇಳಿಬಂದಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟೀಷರ ವಿರುದ್ಧ ವಿಜಯ ಪತಾಕೆ ಹಾರಿಸಿದ 200ನೇ ವರ್ಷಾಚರಣೆ ಕಾರ್ಯಕ್ರಮದ ಅದ್ಧೂರಿ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆದರೆ, ರಾಣಿ ಚನ್ನಮ್ಮನ ವಂಶಸ್ಥರು ಹಾಗೂ ಕಿತ್ತೂರು ಕಲ್ಮಠದ ರಾಜಗುರು ವಂಶಸ್ಥರಿಗೆ ಆಹ್ವಾನ ನೀಡದೇ ಕಡೆಗಣಿಸಿದೆ. ಈ ಮೂಲಕ ಜಿಲ್ಲಾಡಳಿತ ಚನ್ನಮ್ಮನ ಹಾಗೂ ರಾಜಗುರು ಸಂಸ್ಥಾನದ ವಂಶಸ್ಥರಿಗೆ ಅವಮಾನಿಸಿದೆ ಎಂಬ ಆರೋಪ ಕೇಳಿಬಂದಿದೆ.ಅ.23 ರಿಂದ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯ, ರಾಷ್ಟ್ರಮಟ್ಟದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಸರಾ ಉತ್ಸವದಲ್ಲಿ ಮೈಸೂರು ಒಡೆಯರಿಗೆ ಸಿಗುವ ಎಳ್ಳಷ್ಟು ಗೌರವ ಚನ್ನಮ್ಮನ ವಂಶಸ್ಥರಿಗೆ ಸಿಗುತ್ತಿಲ್ಲ ಎನ್ನುವ ಅಸಮಾಧಾನ ಕೇಳಿಬರುತ್ತಿದೆ.2014ರಿಂದ ರಾಣಿ ಚನ್ನಮ್ಮನ ವಂಶಸ್ಥರಿಗೆ ಆಹ್ವಾನಿಸಿ, ಕಿತ್ತೂರು ಉತ್ಸವದಲ್ಲಿ ಸನ್ಮಾನಿಸಿ, ಜಿಲ್ಲಾಡಳಿತ ಗೌರವಿಸುತ್ತ ಬಂದಿತ್ತು. ಆದರೆ, ಈ ಬಾರಿ ಚನ್ನಮ್ಮನ ವಿಜಯೋತ್ಸವಕ್ಕೆ 200ನೇ ವರ್ಷದ ಸಂಭ್ರಮ. ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಜಿಲ್ಲಾಡಳಿತ ವೀರರಾಣಿ ಕಿತ್ತೂರು ಚನ್ನಮ್ಮನ ವಂಶಸ್ಥರನ್ನೇ ನಿರ್ಲಕ್ಷ್ಯ ಮಾಡಿದೆ. ಹಾಗಾಗಿ, ಈ ಬಾರಿ ಚನ್ನಮ್ಮನ ವಂಶಸ್ಥರು ಕಿತ್ತೂರು ಉತ್ಸವವನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ. ಕಿತ್ತೂರು ಉತ್ಸವಕ್ಕೆ ನಮಗೆ ಆಹ್ವಾನ ನೀಡದೆ ಜಿಲ್ಲಾಡಳಿತ ಅವಮಾನ ಮಾಡಿದೆ ಎಂದು ರಾಣಿ ಚನ್ನಮ್ಮನ ವಂಶಸ್ಥರಾದ ಉದಯ ದೇಸಾಯಿ ಆರೋಪಿಸಿದ್ದಾರೆ.2014ರಿಂದ ನಮಗೆ ಕಿತ್ತೂರು ಉತ್ಸವದ ಆಹ್ವಾನ ನೀಡಲಾಗುತ್ತಿತ್ತು. ಅಲ್ಲದೇ, ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿಯೂ ನಮ್ಮ ಹೆಸರನ್ನು ಮುದ್ರಿಸಿ, ಉತ್ಸವದ ಮೊದಲ ದಿನವೇ ನಮರೆ ಆಹ್ವಾನ ನೀಡಲಾಗುತ್ತಿತ್ತು. ಅಲ್ಲದೇ , ನಮಗೆ ಯಾರೂ ಈವರೆಗೆ ಆಮಂತ್ರಣ ನೀಡಿ ಉತ್ಸವಕ್ಕೆ ಆಹ್ವಾನ ನೀಡಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಚೆನ್ನಮ್ಮಾಜಿ ವಂಶಜರು ಎಂದಷ್ಟೇ ಮುದ್ರಣ ಮಾಡಲಾಗಿದೆ. ಆದರೆ, ಯಾರ ಹೆಸರನ್ನು ಇಲ್ಲಿ ಉಲ್ಲೇಖಿಸಿಲ್ಲ. ಈ ಮೂಲಕ ಜಿಲ್ಲಾಡಳಿತ ರಾಣಿ ಚನ್ನಮ್ಮನ ವಂಶಸ್ಥರನ್ನು ಅವಮಾನಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮನವರ 11ನೇ ತಲೆಮಾರಿನ ವಂಶಜರಿದ್ದೇವೆ. ಜಿಲ್ಲಾಡಳಿತ ನಮಗೆ ಆಮಂತ್ರಣ ನೀಡಿದರೂ ನಾವ್ಯಾರೂ ಕಿತ್ತೂರು ಉತ್ಸವದಲ್ಲಿ ಪಾಲ್ಗೊಳ್ಳುವುದಿಲ್ಲ. ದೂರ ಉಳಿಯುವ ಮೂಲಕ ಕಿತ್ತೂರು ಉತ್ಸವ ಬಹಿಷ್ಕರಿಸುತ್ತೇವೆ ಎಂದು ದೇಸಾಯಿ ತಿಳಿಸಿದ್ದಾರೆ.ರಾಜಗುರು ಸಂಸ್ಥಾನದ ವಂಶಸ್ಥರ ಕಡೆಗಣನೆ:

ಇನ್ನು ವೀರರಾಣಿ ಕಿತ್ತೂರು ಚನ್ನಮ್ಮನ ಸ್ವಾತಂತ್ರ ಹೋರಾಟಕ್ಕೆ ಪ್ರೇರಣೆ ನೀಡಿದವರು. ರಾಜಗುರುಗಳು ಆಗಿದ್ದ ಗುರುಸಿದ್ಧ ಸ್ವಾಮೀಜಿ ಕಿತ್ತೂರು ಹತ್ತಿರದಲ್ಲೇ ಇರುವ ಗಂದಿಗವಾಡ ಗ್ರಾಮದ ಹಿರೇಮಠ ಮನೆತನದವರು. ನಂತರ 1973ರವರೆಗೆ ನಾಲ್ಕು ಜನ ರಾಜಗುರುಗಳು ಗಂದಿಗವಾಡ ಹಿರೇಮಠದಿಂದಲೇ ಬಂದವರು. ಅಂತಹ ಹಿರೇಮಠ ಮನೆತನದ ವಂಶಸ್ಥರಿಗೂ ಕಿತ್ತೂರಿನ ವಿಜಯೋತ್ಸವದ 200ನೇ ವರ್ಷಾಚರಣೆಯಲ್ಲಿ ಪ್ರಾಮುಖ್ಯತೆ ನೀಡದೇ ಕಡೆಗಣಿಸಲಾಗಿದೆ. ಗಂದಿಗವಾಡ ಹಿರೇಮಠದ ಮೃತ್ಯುಂಜಯ ಸ್ವಾಮೀಜಿ ಶರಣ ಸಾಹಿತಿಗಳು, ಪ್ರವಚನಕಾರರು, ಆಧ್ಯಾತ್ಮಿಕ ಬೋಧಕರು. ರಾಜಗುರು ಸಂಸ್ಥಾನ ಮನೆತನದ ವಂಶಸ್ಥರು ಆಗಿದ್ದಾರೆ. ಅಂತಹವರನ್ನು ಉತ್ಸವಕ್ಕೆ ಆಮಂತ್ರಣ ನೀಡದೇ ಜಿಲ್ಲಾಡಳಿತ ಕಡೆಗಣನೆ ಮಾಡಿದೆ ಎಂದು ಖಾನಾಪುರ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ವಿಜಯ ಬಡಿಗೇರ ದೂರಿದ್ದಾರೆ.ದಸರಾ ಉತ್ಸವದಲ್ಲಿ ಮೈಸೂರು ಒಡೆಯರಿಗೆ ಸಿಗುವ ಎಳ್ಳಷ್ಟೂ ಗೌರವ ನಮಗೆ ಸಿಗುತ್ತಿಲ್ಲ. ಇದು ನಮಗಷ್ಟೇ ಅಲ್ಲ. ರಾಜ್ಯದ 6 ಕೋಟಿ ಜನರಿಗೆ ಮಾಡಿರುವ ಅಪಮಾನ. ರಾಣಿ ಚನ್ನಮ್ಮನ ವಂಶಸ್ಥರಿಗೆ ಕಿತ್ತೂರು ಉತ್ಸವಕ್ಕೆ ಆಹ್ವಾನ ನೀಡದೇ ಜಿಲ್ಲಾಡಳಿತ ಕಡೆಗಣಿಸಿದೆ. ನಾವು ಕಿತ್ತೂರು ಉತ್ಸವ ಬಹಿಷ್ಕರಿಸುತ್ತೇವೆ.

- ಉದಯ ದೇಸಾಯಿ,

ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥರು.

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ರಾಜಗುರುಗಳು ಆಗಿದ್ದ ಗಂದಿಗವಾಡ ಹಿರೇಮಠ ಸಂಸ್ಥಾನದ ವಂಶಸ್ಥರಿಗೆ ಪ್ರಾಮುಖ್ಯತೆ ನೀಡದೇ ಕಡೆಗಣಿಸಲಾಗಿದೆ.

- ವಿಜಯ ಬಡಿಗೇರ,

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು