
ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗುರುವಾರ ಮಾತನಾಡಿ, ಸಂವಿಧಾನ ಜಾರಿಗೆ ಬರುವ ಮೊದಲು ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಸಾಮಾನ್ಯವಾಗಿತ್ತು, ಇಂದು ಅದು ಸಂವಿಧಾನದ ಮೂಲಕ ಶಿಕ್ಷಾರ್ಹ ಅಪರಾಧವಾಗಿದೆ. ಶಿಕ್ಷಣ ಪಡೆಯುವುದು ಇಂದು ಮಕ್ಕಳ ಹಕ್ಕಾಗಿದ್ದು, ಹಿಂದೆ ಅದು ಸುಲಭವಾಗಿರಲಿಲ್ಲ. ಹಾಗೆಯೇ ಸತಿಪದ್ಧತಿಯಂತಹ ಅನಿಷ್ಟ ಪದ್ಧತಿಗಳು ಮತ್ತು ವಿಧವೆಯರ ಮರುಮದುವೆಗೆ ಇದ್ದ ನಿರ್ಬಂಧಗಳಂತಹ ಇಯರೆ ಹಲವಾರು ಅಸಮಾನತೆಗಳು ಅಂದಿದ್ದವು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಹಲವು ಗಣ್ಯರು, ತಜ್ಞರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಸುಮಾರು ಎರಡು ವರ್ಷ, 11 ತಿಂಗಳು, 18 ದಿನಗಳ ಕಾಲ ಶ್ರಮಿಸಿ ಸಂವಿಧಾನವನ್ನು ರಚಿಸಿದರು. ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಕರ್ನಾಟಕದ ಬಿ.ಎನ್.ರಾವ್, ನಿಜಲಿಂಗಪ್ಪ, ಚೆನ್ನಯ್ಯ ಸೇರಿದಂತೆ ಹಲವು ಗಣ್ಯರ ಕೊಡುಗೆಯನ್ನೂ ಜಿಲ್ಲಾಧಿಕಾರಿಗಳು ಸ್ಮರಿಸಿದರು.ಭಾರತೀಯ ಸಂವಿಧಾನವು ಕೇವಲ ದಾಖಲೆಯಲ್ಲ, ಅದೊಂದು ಜೀವಂತ ದಾಖಲೆಯಾಗಿದೆ. ಹಲವಾರು ದೇಶಗಳು ನಮ್ಮ ಸಂವಿಧಾನದ ತತ್ವಗಳನ್ನು ಅನುಸರಿಸುತ್ತಿವೆ. ಸಾವಿರಾರು ಭಾಷೆಗಳು, ನೂರಾರು ಧರ್ಮಗಳು ಮತ್ತು ವೈವಿಧ್ಯಮಯ ಸಂಸ್ಕೃತಿಗಳ ನಡುವೆಯೂ ನಾವೆಲ್ಲರೂ ಭಾರತೀಯರು ಎಂಬ ಏಕತಾ ಭಾವನೆಯನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಗೊಳಿಸುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಪ್ರತಿದಿನ ಸ್ಮರಿಸಿ, ಗೌರವಿಸಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಸಂವಿಧಾನ ಸಭೆಯಲ್ಲಿ ಪ್ರತಿಯೊಂದು ವಿಧಿ (ಆರ್ಟಿಕಲ್) ಮತ್ತು ಪರಿಚ್ಛೇದದ ಕುರಿತು ಚರ್ಚೆಗಳು ನಡೆಯುವಾಗ, ಸಾಂಪ್ರದಾಯವಾದಿಗಳು ಸೇರಿದಂತೆ ಹಲವರಿಂದ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿದ್ದವು. ಅಂತಹ ಸಂದರ್ಭಗಳಲ್ಲೂ ಅಂಬೇಡ್ಕರ್ ಅವರು ಅತ್ಯಂತ ಶಾಂತ ಮನಸ್ಸು, ದೃಢತೆ ಮತ್ತು ನಿಖರತೆಯಿಂದ ಉತ್ತರ ನೀಡುತ್ತಿದ್ದರು. ಅಂಬೇಡ್ಕರ್ ಕಾನೂನು ಪಂಡಿತರು ಮಾತ್ರವಲ್ಲದೆ ಅವರು ಸಂಸ್ಕೃತ ಸೇರಿದಂತೆ ಹತ್ತು ಹಲವು ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿ ದ್ದರು. ವೈವಿಧ್ಯತೆ ಮತ್ತು ಭಿನ್ನತೆಗಳ ನಡುವೆಯೂ ದೇಶದಲ್ಲಿ ಏಕತೆಯನ್ನು ಸಾಧಿಸಲು ಯಾವ ರೀತಿಯ ಕಾನೂನಾತ್ಮಕ ಅಂಶಗಳು ಅಗತ್ಯ ಎಂಬುದನ್ನು ಅವರು ಪರಿಣಾಮಕಾರಿಯಾಗಿ ಮಂಡಿಸಿದರು ಎಂದರು.
1947ರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗ, ನೂರಾರು ಜಾತಿ, ಪಂಗಡ ಮತ್ತು ಭಾಷೆಗಳಿರುವ ಸಂಕೀರ್ಣ ಸಮಾಜವನ್ನು ಒಗ್ಗೂಡಿಸಿ ಒಂದೇ ರಾಷ್ಟ್ರವಾಗಿ ಕಟ್ಟಲು ಸಾಧ್ಯವೇ ಹಾಗೂ ಪ್ರಜಾಪ್ರಭುತ್ವ ಎಷ್ಟು ವರ್ಷ ಉಳಿಯಬಹುದು ಎಂದು ವಿದೇಶಿ ಪಂಡಿತರು ಟೀಕಾ ಟಿಪ್ಪಣಿ ಮಾಡಿದ್ದರು. ಅದಕ್ಕೆ ದಿಟ್ಟ ಹಾಗೂ ಸಮರ್ಥ ಉತ್ತರ ನೀಡುವ ನಿಟ್ಟಿನಲ್ಲಿ ದೇಶದ ಘನ ಸರ್ಕಾರ ಹಾಗೂ ಸಂವಿಧಾನ ರಚನೆಯ ಮಹತ್ವದ ಹೆಜ್ಜೆ ಮೂಡಿಬಂತು ಎಂದರು.
1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವತಂತ್ರ ಅಧಿನಿಯಮಗಳೊಂದಿಗೆ ದೇಶ ವಿಭಜನೆಯಾದ ಕಾರಣ, ಘಟನಾ ಸಮಿತಿಯನ್ನು ಪುನರ್ ರಚನೆ ಮಾಡಲಾ ಯಿತು. 1948ರಲ್ಲಿ 299 ಜನ ಸದಸ್ಯರ ಸಮಿತಿಯನ್ನು ರೂಪಿಸಲಾಯಿತು. ಇದರಲ್ಲಿ ಕೆ.ಎಂ.ಮುನ್ಷಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು, ಉದ್ಯಮಿಗಳು ಹಾಗೂ ವಿಜ್ಞಾನಿಗಳು ಇದ್ದರು ಎಂದು ಹೇಳಿದರು.
ಅಸ್ಕಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಯಶೋಧ ಅವರು ಕಾರ್ಯಕ್ರಮದ ನಿರೂಪಿಸಿದರು. ತಹಸೀಲ್ದಾರ್ ಸುರೇಶ ವರ್ಮಾ ಅವರು ವಂದಿಸಿದರು.