ಭೂಗತ ಪಾತಕಿ ಹೇಮಂತ ಪೂಜಾರಿ ಸಹಚರ ಸೆರೆ

KannadaprabhaNewsNetwork |  
Published : Oct 24, 2026, 02:45 AM IST
ಸುರೇಶ್ | Kannada Prabha

ಸಾರಾಂಶ

ಉಡುಪಿ ಜಿಲ್ಲೆಯ ಉದ್ಯಮಿ ಮತ್ತು ಗಣ್ಯರಿಂದ ಕೋಟ್ಯಾಂತರ ರು. ವಸೂಲಿ ಮಾಡುವ ಸಂಚಿನಲ್ಲಿ ಕುಖ್ಯಾತ ಭೂಗತ ಪಾತಕಿ ಹೇಮಂತ ಪೂಜಾರಿಗೆ ಸಹಾಯ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೇಮಂತ್ ಪೂಜಾರಿಗಾಗಿ ಕೆಲಸ ಮಾಡುತ್ತಿದ್ದ ಸುರೇಶ್ ಅಮೀನ್ (38) ಎಂದು ಗುರುತಿಸಲಾಗಿದೆ.

ಉಡುಪಿ : ಉಡುಪಿ ಜಿಲ್ಲೆಯ ಉದ್ಯಮಿ ಮತ್ತು ಗಣ್ಯರಿಂದ ಕೋಟ್ಯಾಂತರ ರು. ವಸೂಲಿ ಮಾಡುವ ಸಂಚಿನಲ್ಲಿ ಕುಖ್ಯಾತ ಭೂಗತ ಪಾತಕಿ ಹೇಮಂತ ಪೂಜಾರಿಗೆ ಸಹಾಯ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೇಮಂತ್ ಪೂಜಾರಿಗಾಗಿ ಕೆಲಸ ಮಾಡುತ್ತಿದ್ದ ಸುರೇಶ್ ಅಮೀನ್ (38) ಎಂದು ಗುರುತಿಸಲಾಗಿದೆ.

ಪಡುಬಿದ್ರೆ, ಶಿರ್ವ, ಕಾಪು ಹಾಗೂ ಮಣಿಪಾಲಗಳಲ್ಲಿ ವ್ಯವಹಾರ ನಡೆಸುತ್ತಿರುವ 8 ಮಂದಿ ಗಣ್ಯ ಉದ್ಯಮಿಗಳಿಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹೇಮಂತ ಪೂಜಾರಿ ಕರೆ ಮಾಡಿ ಕೋಟ್ಯಂತರ ರು.ಗಳಿಗೆ ಬೇಡಿಕೆಯಿಟ್ಟಿದ್ದ. ಹಣ ನೀಡದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ 5, ಶಿರ್ವ ಪೊಲೀಸ್ ಠಾಣೆಯಲ್ಲಿ 1, ಕಾಪು ಪೊಲೀಸ್ ಠಾಣೆಯಲ್ಲಿ 1 ಹಾಗೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ 1 ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯ ಶ್ರೀಮಂತ ಉದ್ಯಮಿಗಳನ್ನು ಗುರುತಿಸಿ ಅವರ ಮೊಬೈಲ್ ಸಂಖ್ಯೆ ಮತ್ತು ಇತರ ಮಾಹಿತಿಗಳನ್ನು ಆರೋಪಿ ಸುರೇಶ್ ಅಮೀನ್ ಹೇಮಂತ ಪೂಜಾರಿಗೆ ಒದಗಿಸುತಿದ್ದ. ಅದರಂತೆ ಹೇಮಂತ್ ಪೂಜಾರಿ ಈ ಉದ್ಯಮಿಗಳಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ.

ಈ 8 ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಉದ್ಯಮಿಯೊಬ್ಬರು ಬೇಡಿಕೆಯಿಟ್ಟ ಹಣ ನೀಡದಿದ್ದುದರಿಂದ, ದೂರವಾಣಿ ಕರೆಗಳನ್ನು ಸ್ವೀಕರಿಸದಿದ್ದುದರಿಂದ ಅವರನ್ನು ಕೊಲೆ ಮಾಡಲು ಸುರೇಶ್ ಅಮೀನ್ ಮತ್ತು ಹೇಮಂತ ಪೂಜಾರಿ ಒಳಸಂಚು ರೂಪಿಸಿದ್ದರು. ಈ ಬಗ್ಗೆ ಪೊಲೀಸರು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.ಈ ಸಂಚು ಕಾರ್ಯಾಗತಗೊಳಿಸಲು ಹೇಮಂತ ಪೂಜಾರಿ ಸುರೇಶ್ ಅಮೀನ್‌ಗೆ 5 ಲಕ್ಷ ರು. ಹಣವನ್ನೂ ಕಳುಹಿಸಿದ್ದ. ಇದೀಗ ಆತನನ್ನು ಬಂಧಿಸಿರುವ ಪೊಲೀಸರು ಆತನಿಂದ 4,13,000 ರು. ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಆತನನ್ನು ಮತ್ತೆ ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ತನಿಖೆಗೆ ಸಹಕರಿಸಿ:

ಹೇಮಂತ್ ಪೂಜಾರಿಯಿಂದ ಇನ್ನೂ ಅನೇಕ ಮಂದಿ ಗಣ್ಯರು, ಉದ್ಯಮಿಗಳು, ಶ್ರೀಮಂತರಿಗೆ ಬೆದರಿಕೆ ಕರೆಗಳು ಬಂದಿರುವ ಸಾಧ್ಯತೆ ಇದ್ದು, ಅಂತಹವರೂ ಮುಂದೆ ಬಂದು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಬೇಕು, ಹೊರತು ಹಣ ನೀಡಬಾರದು ಅಥವಾ ಹೇಮಂತ್ ಪೂಜಾರಿಗೆ ಸಹಕರಿಸಬಾರದು ಎಂದು ಮನವಿ ಮಾಡಿರುವ ಎಸ್ಪಿ ಹರಿರಾಮ್ ಶಂಕರ್, ಅಪರಾಧಿಗಳಿಗೆ ಸಹಕರಿಸಿದರೇ ಅದೂ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು