ಪರಶಿವಮೂರ್ತಿ ದೋಟಿಹಾಳ
ಪಟ್ಟಣದಲ್ಲಿ ಪುರಸಭೆ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದೆ ಇರುವುದರಿಂದ ಎಲ್ಲಿಂದರಲ್ಲಿ ಕಸದ ರಾಶಿ ಬಿದ್ದಿದ್ದು ಸಾಂಕ್ರಾಮಿಕ ರೋಗಗಳ ಉಲ್ಬಣದ ಆತಂಕ ನಾಗರಿಕರಲ್ಲಿ ಮನೆ ಮಾಡುತ್ತಿದೆ.
ಕಂಡ ಕಂಡಲ್ಲಿ ಕಸದ ರಾಶಿ, ಕಸದ ತೊಟ್ಟಿಯಾದ ರಸ್ತೆ, ತುಂಬಿರುವ ಚರಂಡಿ, ರಸ್ತೆಯಲ್ಲಿ ಬಿದ್ದಿರುವ ಕಸದಲ್ಲಿ ಆಹಾರ ಹುಡುಕುತ್ತಿರುವ ಹಂದಿ, ನಾಯಿ, ದನಕರು ಮತ್ತಷ್ಟು ಆಧ್ವಾನ ಮಾಡಿವೆ. ಇಂತಹ ಅವ್ಯವಸ್ಥೆ ಸೃಷ್ಟಿಗೆ ಕಾರಣರಾದ ಪುರಸಭೆ ಅಧಿಕಾರಿಗಳು, ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಪಟ್ಟಣದ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.ತುಂಬಿದ ಚರಂಡಿ:
ಒಂದೆಡೆ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮತ್ತೊಂದೆಡೆ ಅನೈರ್ಮಲ್ಯದ ವಾತಾವರಣದಿಂದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರ. ತ್ಯಾಜ್ಯ ವಿಲೇವಾರಿ ಮಾಡುವಂತೆ ಹಲವು ಬಾರಿ ಪುರಸಭೆಗೆ ಮೌಖಿಕವಾಗಿ ಹೇಳಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಇದೀಗ ಮತ್ತೆ ಕೊರೋನಾ ವೈರಸ್ ಆತಂಕ ಎದುರಾಗಿದೆ. ಮಳೆಗಾಲಕ್ಕೂ ಮೊದಲೇ ನೀರು ಹರಿದು ಹೋಗುವ ಕಾಲುವೆ, ಚರಂಡಿ ಸ್ವಚ್ಛಗೊಳಿಸಬೇಕಿದ್ದ ಅಧಿಕಾರಿಗಳು ಈ ವರೆಗೂ ಕಾರ್ಯಪ್ರವೃತ್ತವಾಗಿಲ್ಲ ಎಂದು ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ಛೀಮಾರಿ ಹಾಕಿದ್ದಾರೆ.
ಹೋರಾಟದ ಎಚ್ಚರಿಕೆ:ಮುಂಗಾರು ಮಳೆ ಆರಂಭಕ್ಕೂ ಮೊದಲೆ ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತುಂಬಿರುವ ಚರಂಡಿ ಹೂಳೆತ್ತಿ ಬೀಜಿಂಗ್ ಫೌಂಡರ್ ಅಳವಡಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕು. ಇಲ್ಲದಿದ್ದರೆ ಪುರಸಭೆ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ತೀವ್ರತೆ ಹೆಚ್ಚಾಗುವ ಕಾರಣ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಜತೆಗೆ ತ್ಯಾಜ್ಯ ವಿಲೇವಾರಿ, ಚರಂಡಿ ಸ್ವಚ್ಛಗೊಳಿಸುವುದು, ಫಾಗಿಂಗ್ ಮಾಡಿಸಿ ಸೊಳ್ಳೆ ನಿಯಂತ್ರಿಸುವುದು, ನೀರು ನಿಲ್ಲದಂತೆ ಕ್ರಮ ವಹಿಸಲು ಪುರಸಭೆ ಕ್ರಮಕೈಗೊಳ್ಳಬೇಕು.
ಮಲ್ಲಿಕಾರ್ಜುನ ಕುಷ್ಟಗಿ ಸ್ಥಳೀಯ ನಿವಾಸಿಕುಷ್ಟಗಿ ಪಟ್ಟಣದಲ್ಲಿ ಕಸ ವಿಲೇವಾರಿ ಹಾಗೂ ಚರಂಡಿಗಳ ಸ್ವಚ್ಛತೆ ಕುರಿತು ಸಂಬಂಧಿಸಿದ ನೈರ್ಮಲ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು.ಸುರೇಶ ಶೆಟ್ಟರ ಪ್ರಭಾರಿ ಮುಖ್ಯಾಧಿಕಾರಿ ಪುರಸಭೆ ಕುಷ್ಟಗಿ