ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗ ಸಮಸ್ಯೆ ಖಂಡಿಸಿ ಕಾಂಗ್ರೆಸ್‌ನಿಂದ ದೇಶಾದ್ಯಂತ ಬೃಹತ್ ಚಳವಳಿ ನಡೆಸಲಾಗುವುದು ಎಂದು ವಿಧಾನಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಹುಬ್ಬಳ್ಳಿ
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗ ಸಮಸ್ಯೆ ಖಂಡಿಸಿ ಕಾಂಗ್ರೆಸ್ಸಿನಿಂದ ದೇಶಾದ್ಯಂತ ಬೃಹತ್ ಚಳವಳಿ ನಡೆಸಲಾಗುವುದು ಎಂದು ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಯುವಕರ ಹಿತರಕ್ಷಣೆ ಕಾಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದ ಈ ನೀತಿ ವಿರೋಧಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದರು.
ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಅಭಿಯಾನದ ವಿವರ ನೀಡಿದ್ದು, ಪರೀಕ್ಷಾ ಹಗರಣ ಮತ್ತು ಉದ್ಯೋಗ ನೇಮಕಾತಿ ವಿಳಂಬದಿಂದ ತೊಂದರೆಗೆ ಒಳಗಾಗಿರುವ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಶಿಕ್ಷಕರನ್ನು ಒಂದೇ ವೇದಿಕೆಯಡಿ ತರುವುದು ಈ ಹೋರಾಟದ ಮುಖ್ಯ ಉದ್ದೇಶವಾಗಿದೆ. ಇನ್ನು ಕೇಂದ್ರ ಶಿಕ್ಷಣ ಸಚಿವರು ಶಿಕ್ಷಣ ಇಲಾಖೆ ನಡೆಸುವಲ್ಲಿ ವಿಫಲರಾಗಿದ್ದು, ಅವರ ರಾಜೀನಾಮೆಗೆ ಸಹ ಒತ್ತಾಯಿಸಿ ಪ್ರತಿಭಟಿಸಲಾಗುವುದು ಎಂದರು.
21ಕ್ಕೆ ಹರಿಪ್ರಸಾದ್ ಪದಗ್ರಹಣ:
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮವನ್ನು ಜೂ. 21ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕರಾದ ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೇವಾಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಶಾಸಕರು, ಸಂಸದರು, ಮಾಜಿ ಸಚಿವರು ಪಾಲ್ಗೊಳ್ಳುವರು ಎಂದ ಅವರು, ಕಳೆದ 6 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಸಮಾರಂಭ ಸಹ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.