ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ವಿಶ್ವ ಪಾರಂಪರಿಕ ತಾಣ ಸೇರಿದಂತೆ ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಮಾರಕ ಹಾಗೂ ಪ್ರವಾಸಿ ತಾಣಗಳಿಗೆ ಯುನೆಸ್ಕೋ ಮತ್ತು ಐಕಾಮಾಸ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಆರು ವಾರಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ಯುನೆಸ್ಕೋ ತಜ್ಞರಾದ ಇಂಡೋನೇಷಿಯಾದ ಜಾರ್ಜ್ ಅಬುಂಗ್ ಹಾಗೂ ಐಕಾಮಾಸ್ ತಜ್ಞ ಜಪಾನ್‌ನ ಇಶಿತಾ ಶಿಮೋಡಾ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರಮುಖ ಸ್ಮಾರಕಗಳ ಸಂರಕ್ಷಣೆ, ನಿರ್ವಹಣೆ ಹಾಗೂ ಪ್ರವಾಸೋದ್ಯಮದ ಬೆಳವಣಿಗೆಗೆ ಸಂಬಂಧಿಸಿದ ವಿಷಯ ಪರಿಶೀಲಿಸಿದರು.
ಹಂಪಿಯ ವಿಜಯ ವಿಠ್ಠಲ ದೇವಸ್ಥಾನ, ಕೃಷ್ಣ ದೇವಸ್ಥಾನ, ಲೋಟಸ್ ಮಹಲ್, ಗಗನ್ ಮಹಲ್ ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಅವುಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಸಂರಕ್ಷಣಾ ಕ್ರಮ ಅವಲೋಕಿಸಲಾಯಿತು. ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ನಿರ್ಮಾಣ ಕಾರ್ಯ, ವಾಣಿಜ್ಯ ಮಳಿಗೆಗಳ ವಿಸ್ತರಣೆ, ಪ್ರವಾಸಿಗರ ನಿರ್ವಹಣೆ ಹಾಗೂ ಸ್ಮಾರಕಗಳ ನೋಟಕ್ಕೆ ಅಡ್ಡಿಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸೂಕ್ತ ನಿರ್ದೇಶನ ನೀಡಿದ ಅವರು, ಹಂಪಿ ಜೀವಂತ ಸಂಸ್ಕೃತಿಯ ತಾಣವಾಗಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.ಸ್ಥಳೀಯರ ಬದುಕಿಗೂ ಆದ್ಯತೆ:ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಜತೆಗೆ ಸ್ಥಳೀಯ ಜನರ ಜೀವನೋಪಾಯಕ್ಕೂ ಆದ್ಯತೆ ನೀಡುವ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸುವಂತೆ ತಿಳಿಸಿದರು. ಪ್ರವಾಸಿ ಮಾರ್ಗದರ್ಶಕರು, ಆಟೋ ಚಾಲಕರು, ಹೋಟೆಲ್ ಕಾರ್ಮಿಕರು, ಅರ್ಚಕರು, ರೈತರು ಹಾಗೂ ಸ್ಥಳೀಯ ಕಲಾವಿದರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಸಮತೋಲನದ ಕ್ರಮ ಕೈಗೊಳ್ಳುವ ಅಗತ್ಯತೆ ಚರ್ಚಿಸಲಾಯಿತು ಎಂದು ಮಾಹಿತಿ ನೀಡಿದರು. ಸ್ಮಾರಕಗಳ ಸಂರಕ್ಷಣಾ ನಿಯಮ, ಕೋರ್ ವಲಯದಲ್ಲಿನ ನಿರ್ಬಂಧ, ಸ್ಥಳೀಯರ ಮನೆ ಆಸ್ತಿಗಳ ರಕ್ಷಣೆ, ಪ್ರವಾಸಿಗರ ಸಂಚಾರ ವ್ಯವಸ್ಥೆ ಹಾಗೂ ಹೋಂಸ್ಟೇ ಸೇರಿದಂತೆ ಸ್ಥಳೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಚರ್ಚೆಗೆ ಬಂದವು. ಸ್ಮಾರಕಗಳ ಐತಿಹಾಸಿಕ ಮಹತ್ವ ಕಾಪಾಡುವುದರ ಜತೆಗೆ ಸ್ಥಳೀಯ ಸಮುದಾಯದ ಬದುಕು ಮತ್ತು ಸಂಸ್ಕೃತಿಯೂ ಉಳಿಯುವಂತೆ ಯೋಜನೆ ರೂಪಿಸುವುದು ಮುಖ್ಯವಾಗಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು.