ಯುನೆಸ್ಕೋ ತಂಡ ಹಂಪಿಗೆ ಆಗಮನ, ಸ್ಮಾರಕಗಳ ವೀಕ್ಷಣೆ

KannadaprabhaNewsNetwork |  
Published : Oct 25, 2026, 02:30 AM IST
ಫೋಟೋವಿವರ- (24ಎಚ್‌ಪಿಟಿ1) ಹಂಪಿಗೆ ಆಗಮಿಸಿದ ಯುನೆಸ್ಕೋ ತಂಡ | Kannada Prabha

ಸಾರಾಂಶ

17 ವರ್ಷಗಳ ನಂತರ ಹಂಪಿಗೆ ಯುನೆಸ್ಕೋ ತಂಡ ಬರುತ್ತಿರುವುದರಿಂದ ಅಧಿಕಾರಿಗಳ ವರ್ಗದಲ್ಲಿ ಸಂಚಲನ ಮೂಡಿಸಿದೆ.

ಹೊಸಪೇಟೆ: ಯುನೆಸ್ಕೋ ವಿಶ್ವ ಪಾರಂಪರಿಕ ಕೇಂದ್ರ ಮತ್ತು ಸ್ಮಾರಕ ಮತ್ತು ತಾಣಗಳ ಮೇಲಿನ ಅಂತಾರಾಷ್ಟ್ರೀಯ ಮಂಡಳಿಯ (ಐಸಿಒಎಂಒಎಸ್‌) ತಜ್ಞರ ನಿಯೋಗ ಸ್ಮಾರಕಗಳ ಪರಿಶೀಲನೆಗಾಗಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಹಂಪಿಗೆ ಆಗಮಿಸಿದ್ದರಿಂದ ಹಂಪಿ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದೆ.

ಅ.24 ರಿಂದ 27ರ ವರೆಗೆ ಹಂಪಿ ಸೇರಿದಂತೆ ಆನೆಗುಂದಿ, ಅಂಜನಾದ್ರಿ ಪ್ರದೇಶ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಯುನೆಸ್ಕೋ ತಂಡ ವಿವಿಧ ಸಭೆ ನಡೆಸಿ ಹಂಪಿ ಸ್ಮಾರಕಗಳನ್ನು ವೀಕ್ಷಣೆ ಮಾಡಲಿದ್ದಾರೆ.

ಯುನೆಸ್ಕೋ ತಂಡದಲ್ಲಿ ಅಂತಾರಾಷ್ಟ್ರೀಯ ಪಾರಂಪರಿಕ ಪರಿಣಿತ ಕಿನ್ಯಾದ ಜಾರ್ಜ್ ಅಬುಂಗ್ ನೇತೃತ್ವದ ಯುನೆಸ್ಕೋ ತಂಡದಲ್ಲಿ ಜಪಾನ್‌ ದೇಶದ ಇಚಿಡಾ ಶಿಮೋಡಾ ಇದ್ದು, ಅವರು ಹಂಪಿಯ ಸ್ಮಾರಕಗಳ ಪರಂಪರೆ ಪರಿಶೀಲಿಸಿ ಹಂಪಿಯಿಂದ ತೆರಳಿ ವರದಿ ಸಲ್ಲಿಸಲಿದ್ದಾರೆ. ಹಂಪಿ ಸ್ಮಾರಕಗಳ ಗುಚ್ಚವನ್ನು ಯುನೆಸ್ಕೊ 1986ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದ ಬಳಿಕ ಹಂಪಿಗೆ ವಿಶ್ವಮನ್ನಣೆ ದೊರೆತಿತ್ತು. 1999ರಲ್ಲಿ ವಿಶ್ವ ಪರಂಪರೆ ಪಟ್ಟಿಯಿಂದಲೇ ತೆಗೆದು ಅಪಾಯ ಪಟ್ಟಿಗೆ ಸೇರಿಸಲಾಗಿತ್ತು. ಆಗ ಹಂಪಿಯ ಅಭಿವೃದ್ಧಿಗೆ ಯುನೆಸ್ಕೋ ಹಲವು ಕ್ರಮ ಸೂಚಿಸಿತ್ತು. ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಯುನೆಸ್ಕೋ ಪಟ್ಟಿಯಿಂದ ಹಂಪಿಯನ್ನು ಕೈ ಬಿಡುವ ಬೆದರಿಕೆ ಯುನೆಸ್ಕೋ ಹಾಕಿತ್ತು. ನಂತರ ಯುನೆಸ್ಕೋ ಮಾರ್ಗದರ್ಶನದಂತೆ ಹಂಪಿಯಲ್ಲಿ ಪ್ರಗತಿ ಕಾರ್ಯ ನಡೆಸಿದಾಗ ಮತ್ತೆ ಹಂಪಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಯಿತು.

ಈ ಮೊದಲು ಹಂಪಿಗೆ 2009ರಲ್ಲಿ ಯುನೆಸ್ಕೋ ತಂಡ ಬಂದು ವೀಕ್ಷಣೆ ಮಾಡಿತ್ತು, ನಂತರ ಈಗ ಅಂದರೆ 17 ವರ್ಷಗಳ ನಂತರ ಹಂಪಿಗೆ ಯುನೆಸ್ಕೋ ತಂಡ ಬರುತ್ತಿರುವುದರಿಂದ ಅಧಿಕಾರಿಗಳ ವರ್ಗದಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರಿನಿಂದ ಹಂಪಿಗೆ ಯುಸೆಸ್ಕೋ ತಂಡ ಆಗಮಿಸಿದ್ದು, ತಂಡದ ಜತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿಜ್‌ ಶರ್ಮಾ ಸೇರಿದಂತೆ ಒಟ್ಟು ಆರು ಜನ ಅಧಿಕಾರಿಗಳು ಹಂಪಿ ವೀಕ್ಷಣೆಗೆ ಆಗಮಿಸಿದ್ದಾರೆ. ಹಂಪಿ ಸಮೀಪದ ಕಮಲಾಪುರದ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ನಲ್ಲಿ ಯುನೆಸ್ಕೋ ತಂಡ ಉಳಿದುಕೊಂಡಿದೆ.

ಯುನೆಸ್ಕೊ ತಂಡ ರಾಜ್ಯ ಸರ್ಕಾರ, ಎಎಸ್ಐ, ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ), ಪ್ರವಾಸೋದ್ಯಮ, ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗಳ ಜತೆಗೆ ಮಧ್ಯಾಹ್ನ ಮತ್ತು ಸಂಜೆ ಸಭೆ ನಡೆಸಿದೆ.

ಅ. 25ರ ಭಾನುವಾರ ಬೆಳಗ್ಗೆ ಯುನೆಸ್ಕೊ ತಜ್ಞರ ತಂಡ ಕಮಲಾಪುರದ ಎಎಸ್‌ಐ ಮ್ಯೂಸಿಯಂ, ಹಂಪಿಯ ಮಾಲ್ಯವಂತ ರಘುನಾಥ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನಗಳಿಗೆ ಭೇಟಿ ನೀಡಿ ಮಧ್ಯಾಹ್ನ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ತೆರಳಲಿದೆ. ನಂತರ ಆನೆಗುಂದಿಯ ಗಗನ ಮಹಲ್‌ಗಳಿಗೆ ಭೇಟಿ ನೀಡಲಿದೆ. ಸಂಜೆ 5.30ಕ್ಕೆ ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಂಪಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ.

ಅ.26ರಂದು ಬೆಳಗ್ಗೆ ಹಂಪಿಯ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ, ಕೃಷ್ಣ ದೇವಸ್ಥಾನ, ಕಮಲ ಮಹಲ್ ಪ್ರದೇಶಗಳಿಗೆ ಭೇಟಿ ನೀಡಲಿರುವ ಯುನೆಸ್ಕೋ ತಂಡ, ಮಧ್ಯಾಹ್ನದ ನಂತರ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ನಲ್ಲಿ ಹಂಪಿ ಮಾಸ್ಟರ್ ಪ್ಲಾನ್‌, ಸಂಯೋಜಿತ ನಿರ್ವಹಣಾ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಿದೆ.

ಆ. 27ರಂದು ಬೆಳಗ್ಗೆ ಮತ್ತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅಂದು ಮಧ್ಯಾಹ್ನ 2.30ಕ್ಕೆ ರಸ್ತೆ ಮೂಲಕ ಬೆಂಗಳೂರಿಗೆ ತೆರಳಿ ಅ.28ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಎಎಸ್‌ಐ ಮತ್ತು ಯುನೆಸ್ಕೊ ತಂಡಗಳ ಜತೆಗೆ ಸಭೆ ನಡೆಯಲಿದೆ. ನಂತರ ಯುನೆಸ್ಕೋಗೆ ವರದಿ ಸಲ್ಲಿಸಲಿದ್ದಾರೆ. ಬಳಿಕ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹಂಪಿ ಭದ್ರವಾಗಿರುತ್ತದೆಯೋ ಅಪಾಯಕಾರಿ ತಾಣಗಳ ಪಟ್ಟಿಯಲ್ಲಿ ಸೇರುತ್ತದೆಯೋ ಎಂಬುದು ಕಾದು ನೋಡಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಷ್ಟಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಮಸ್ಯೆಗಳ ತಾಂಡವ!
ಮನೆ-ಮನೆಗೂ ವಿಜ್ಞಾನ ಮುಟ್ಟಿಸುವ ಕೆಲಸವಾಗಲಿ: ಪ್ರೊ. ಸಿ.ಎಸ್. ಅರಸನಾಳ