ವಿರೂಪಾಕ್ಷೇಶ್ವರ, ಪಂಪಾದೇವಿ, ಶ್ರೀ ಕೃಷ್ಣ ದೇವಸ್ಥಾನ, ಭುವನೇಶ್ವರಿ ದೇಗುಲ ದರ್ಶನ,ಎದುರು ಬಸವಣ್ಣ, ಸಾಲು ಮಂಟಪ, ಮಹಾನವಮಿ ದಿಬ್ಬ ಸೇರಿ ಸ್ಮಾರಕಗಳ ವೀಕ್ಷಣೆ
ಯುನೆಸ್ಕೋ ತಜ್ಞರ ತಂಡವು ಸೋಮವಾರ ಬೆಳಗ್ಗೆ ಹಂಪಿಯ ವಿರುಪಾಕ್ಷೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಆವರಣದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದುಕೊಂಡಿತು.
ವಿರೂಪಾಕ್ಷೇಶ್ವರ ದೇವರ ದರ್ಶನದ ನಂತರ ಪಂಪಾದೇವಿ ಮತ್ತು ಭುವನೇಶ್ವರಿ ದರ್ಶನ ಪಡೆದುಕೊಂಡು ದೇವಸ್ಥಾನದ ಮಹಿಮೆ, ಮತ್ತು ದೇವರ ಶಕ್ತಿ ರೂಪದ ಬಗ್ಗೆ ಮತ್ತು ಭಕ್ತರು ಎಲ್ಲೆಲ್ಲಿಂದ ದೇವಸ್ಥಾನಕ್ಕೆ ಬರಲಾಗುತ್ತದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ನಂತರ ಎದುರು ಬಸವಣ್ಣ ಮಂಟಪದ ಬಳಿ ತೆರಳಿ ಎದುರು ಬಸವಣ್ಣ ಮಂಟಪ ಹಾಗೂ ಬಸವಣ್ಣ ಮೂರ್ತಿ ಸೇರಿದಂತೆ ಎರಡು ಬದಿಯಲ್ಲಿರುವ ಸಾಲು ಮಂಟಪಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೆಲ ವರ್ಷಗಳ ಹಿಂದೆ ಸಾಲು ಮಂಟಪಗಳು ವ್ಯಾಪಾರ ಕೇಂದ್ರಗಳಾಗಿದ್ದವು. ಅಂಗಡಿಗಳನ್ನು ತೆರವುಗೊಳಿಸಿ, ಈಗ ಸಾಲು ಮಂಟಪಗಳ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಯುನೆಸ್ಕೋ ತಂಡಕ್ಕೆ ಅಧಿಕಾರಿಗಳು ವಿವರಿಸಿದರು.
ಹಂಪಿಯ ಸ್ಮಾರಕಗಳ ರಕ್ಷಣೆಗೆ ನಿತ್ಯವೂ ಕಾಳಜಿ ವಹಿಸುತ್ತಿರುವ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಿಬ್ಬಂದ್ದಿಯೊಂದಿಗೆ ಯುನೆಸ್ಕೋ ತಂಡದವವರು ಫೋಟೋ ತೆಗೆಸಿಕೊಂಡರು.
ಹಂಪಿಯಲ್ಲಿ ನಿರ್ಮಾಣವಾಗಿರುವ ನೂತನ ರಸ್ತೆಯನ್ನು ವೀಕ್ಷಿಸಿ, ಇದೇ ರಸ್ತೆಯಲ್ಲಿ ಬರುವ ಹಿರಿಯ ಛತ್ರವನ್ನು ವೀಕ್ಷಿಸಿದರು.
ನಂತರ ಮಹಾನವಮಿ ದಿಬ್ಬಕ್ಕೆ ತೆರಳಿ, ಸುಮಾರು ಒಂದು ಗಂಟೆಗಳ ಕಾಲ ದಿಬ್ಬದ ಕೆಳಭಾಗದಲ್ಲಿರುವ ಕಲ್ಲಿನ ಬಾಗಿಲುಗಳನ್ನು ವೀಕ್ಷಿಸಿ, ಅದರ ಬಗ್ಗೆ ಮಾಹಿತಿ ಪಡೆದುಕೊಂಡರು. ಮಹಾನವಮಿ ದಿಬ್ಬವನ್ನು ಹತ್ತಿ ಮೇಲಿನಿಂದ ಹಂಪಿಯ ನೋಟವನ್ನು ವೀಕ್ಷಿಸಿ, ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡರು.ನಂತರ ವಿಜಯನಗರ ಸಾಮ್ರಾಜ್ಯದಲ್ಲಿ ನೀರಾವರಿ ವ್ಯವಸ್ಥೆ ಹೇಗಿತ್ತು ಎನ್ನುವುದಕ್ಕೆ ಕಲ್ಲಿನ ಕಾಲುವೆಗಳ ಮೂಲಕ ನೀರಾವರಿ ವ್ಯವಸ್ಥೆಯನ್ನು ವೀಕ್ಷಿಸಿ ಆಶ್ಚರ್ಯವ್ಯಕ್ತಪಡಿಸಿದರು.
ಯುನೆಸ್ಕೋ ತಂಡದವರು ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿ ಭೋಜನ ವಿರಾಮದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಯುನೆಸ್ಕೋ ತಂಡದ ಅಂತರರಾಷ್ಟ್ರೀಯ ಪಾರಂಪರಿಕ ಪರಿಣಿತ ಕಿನ್ಯಾದ ಜಾರ್ಜ್ ಅಬುಂಗ್, ಜಪಾನ್‌ನ ಇಚಿಡಾ ಶಿಮೋಡಾ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿಜ್ ಶರ್ಮಾ ಸೇರಿದಂತೆ ಆರು ಜನರ ತಂಡದ ಸದಸ್ಯರು, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.